ಬೀದರ್ : ಸಹೋದರಿಯರಿಬ್ಬರು ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಅಟರ್ಗ ಗ್ರಾಮದಲ್ಲಿ ಇಂದು ನಡೆದಿದೆ.
ಗೋವಿಂದ್ ರಾವ್ ಮೋರೆ ಅವರ ಮಕ್ಕಳಾದ ಅಂಕಿತಾ (15) ಮತ್ತು ಶ್ರದ್ಧಾ(10) ಎಂಬುವರು ಮೃತ ಸಹೋದರಿಯರು. ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಇದು ಆತ್ಮಹತ್ಯೆಯೋ, ಕೊಲೆಯೂ, ಆಕಸ್ಮಿಕ ಸಾವೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 24 ಗಂಟೆಯೊಳೆಗೆ ಎರಡು ಎನ್ಕೌಂಟರ್; ಪೊಲೀಸರ ಗುಂಡಿಗೆ ಇಬ್ಬರು ಅತ್ಯಾಚಾರ ಆರೋಪಿಗಳು ಬಲಿ
ಒಂದೇ ಕುಟುಂಬದ ಸಹೋದರಿಯರಾದ ಅಂಕಿತಾ ಮತ್ತು ಶ್ರದ್ಧಾ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಘಟನೆ ಅನುಮಾನಾಸ್ಪದದಿಂದ ಕೂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಾವಿನ ಹಿಂದೆ ಯಾರದೇ ಕೈವಾಡವಿದ್ದರೂ ಕೂಲಂಕಷವಾಗಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೀದರ್ ಜಿಲ್ಲಾ ವರಿಷ್ಠಾಧಿಕಾರಿ ಕಿಶೋರ್ ಬಾಬು ಅವರಿಗೆ ಶಾಸಕ ಈಶ್ವರ ಖಂಡ್ರೆ ಸೂಚಿಸಿದ್ದಾರೆ.