ಬೀದರ್: ಮಹಾಮಾರಿ ಕೊರೊನಾ ವೈರಸ್ ಸೊಂಕು ತಡೆಗಟ್ಟಲು ಈ ಗ್ರಾಮದ ಜನ ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಕತ್ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೆ, ಅಗತ್ಯ ಕಾರ್ಯಗಳಿಗೆ ಮನೆಯಿಂದ ಹೊರ ಬಂದಾಗ ಸೋಂಕು ಹರಡದಂತೆ ಸೂಕ್ಷ್ಮವಾಗಿ ಎಚ್ಚರಿಕೆ ವಹಿಸಿಕೊಂಡಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ (ಡಬ್ಲೂ) ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ನೀರು ತರಲು ಬರುವ ಮಹಿಳೆಯರಿಗೆ ನೀರಿನ ಟ್ಯಾಂಕ್ ಮತ್ತು ನಲ್ಲಿ ಹತ್ತಿರ ರಂಗೋಲಿಯಲ್ಲಿ ಚೌಕಟ್ಟು ಹಾಕಿಕೊಂಡಿದ್ದಾರೆ. ಒಬ್ಬರಿಂದ ಮತ್ತೊಬ್ಬರು ಮೂರು ಅಡಿಗಿಂತ ಹೆಚ್ಚು ಅಂತರ ಕಾಯ್ದುಕೊಂಡಿದ್ದಾರೆ.
ಬೇಸಿಗೆಯ ಸುಡು ಬಿಸಿಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸುಡುಬಿಸಿಲಿನಲ್ಲೂ ನೀರಿಗೆ ಬರುವವರು ಕೊರೊನಾ ವೈರಸ್ ಸೊಂಕು ಪಸರಿಸದಂತೆ ಸೂಕ್ತವಾಗಿ ಪರಿಸ್ಥಿತಿಯನ್ನು ನಿಭಾಯಿಸ್ತಿದ್ದಾರೆ. ಕಿರಾಣಿ ಅಂಗಡಿಗಳ ಮುಂದೆಯೂ ಸಹ ಅಗತ್ಯ ವಸ್ತುಗಳ ಖರೀದಿಗೆ ಬರುವವರು ನಿಂತುಕೊಳ್ಳಲು ರಂಗೋಲಿ ಚೌಕಟ್ಟನ್ನು ಹಾಕಲಾಗಿದೆ.
ನಗರ ಪ್ರದೇಶದಲ್ಲಿ ಮನೆಯಿಂದ ಹೊರಬಾರದಂತೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಆದರೂ ಯುವಕರು ಬೀದಿ, ಬೀದಿಗಳಲ್ಲಿ ಅಲೆಯುತ್ತಾ ದರ್ಪ ಮೆರೆಯುತ್ತಿದ್ದಾರೆ. ಲಾಕ್ಡೌನ್ ಆದೇಶವನ್ನೂ ಉಲ್ಲಂಘಿಸುತ್ತಾ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ನಗರ ಪ್ರದೇಶಗಳಿಂತ ಭಿನ್ನವಾಗಿವೆ. ಪಟ್ಟಣದ ಮಂದಿಗಿಂತ ಗ್ರಾಮೀಣ ಜನರೇ ವಾಸಿ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಗ್ರಾಮೀಣ ಪ್ರದೇಶದ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಜನರನ್ನು ನೋಡಿ ನಗರದ ಜನತೆ ಬುದ್ದಿ ಕಲಿಯಬೇಕಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.