ಬೀದರ್: ಕೊರೊನಾ ಲಸಿಕೆ ಪಡೆಯುವಂತೆ ಎಷ್ಟೇ ಜಾಗೃತಿ, ಮನವಿ ಮಾಡಿದರೂ ಹಿಂದೇಟು ಹಾಕುತ್ತಿರುವ ಜನರನ್ನು ಗುರುತಿಸಿ ಸ್ಥಳದಲ್ಲೇ ಲಸಿಕೆ ನೀಡಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಧಿಕಾರಿಗಳ ಜೊತೆ ಬೆಳಗ್ಗಿನಿಂದಲೇ ರಸ್ತೆಗಿಳಿದು ಅಭಿಯಾನ ಆರಂಭಿಸಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬೈಕ್, ಕಾರು, ಸಾರಿಗೆ ಬಸ್, ಆಟೋ ಹೀಗೆ ವಿವಿಧ ವಾಹನಗಳಲ್ಲಿ ಸಂಚರಿಸುವ ಜನರು ಲಸಿಕೆ ಪಡೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಲಸಿಕೆ ಪಡೆಯದೆ ಸುತ್ತಾಡುತ್ತಿದ್ದ ಜನರನ್ನು ಗುರುತಿಸಿ, ಸ್ಥಳದಲ್ಲೇ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಲಸಿಕೆ ನೀಡಿದರು.
ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್ಗಳನ್ನು ನಿಲ್ಲಿಸಿ ಖುದ್ದು ಪರಿಶಿಲನೆ ನಡೆಸಿದ ಜಿಲ್ಲಾಧಿಕಾರಿ, ಲಸಿಕೆ ಪಡೆಯದ ಪ್ರಯಾಣಿಕರಿಗೆ ವ್ಯಾಕ್ಸಿನೇಷನ್ ಹಾಕಿಸಿದರು.
ಜಿಲ್ಲೆಯನ್ನು ಕೊರೊನಾ ಮುಕ್ತರಾಗಿ ಮಾಡಲು ಅಧಿಕಾರಿಗಳಿಗೆ ಸಾರ್ವಜನಿಕರು ಕೂಡ ಸಹಕರಿಸಬೇಕಾಗಿದೆ. ಸದ್ಯ ಜಿಲ್ಲೆಯಲ್ಲಿ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ಈ ಸಂಖ್ಯೆ ಶೂನ್ಯ ಮಾಡಬೇಕಾಗಿದೆ. ಇದಕ್ಕಾಗಿ ಸಾರ್ವಜನಿಕರಲ್ಲಿ ವಿಭಿನ್ನ ರೀತಿಯಲ್ಲಿ ಲಸಿಕೆ ಜಾಗೃತಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ: Mysuru Gang Rape: ಮುಂಬೈಗೆ ತೆರಳಿದ ಸಂತ್ರಸ್ತೆಗೆ ಆರೋಪಿಗಳ ಫೋಟೋ ಕಳಿಸಿ ಖಚಿತಪಡಿಸಿಕೊಂಡ ಪೊಲೀಸರು!