ಬೀದರ್ : ವಿಧಾನಸಭೆಯ ಅಧಿವೇಶನದ ನಡುವೆಯೂ ಸಚಿವ ಪ್ರಭು ಚೌಹಾಣ್ ಅವರು ನಿನ್ನೆ ಬೆಳಿಗ್ಗೆಯಿಂದ ಸಂಜೆವರೆಗೆ ಸ್ವಕ್ಷೇತ್ರದಲ್ಲಿ ಮ್ಯಾರಥಾನ್ ಮಾದರಿಯಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವರಿಸಿದರು.
ಜಿಲ್ಲೆಯ ಔರಾದ್ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2019-20ನೇ ಸಾಲಿನ ಕಾಮಗಾರಿಗಳಾದ ಶಾಲಾ ಮತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣ, ಸೇವಾಲಾಲ ಭವನ, ಶವಾಗಾರ ಕೋಣೆ ನಿರ್ಮಾಣ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಿದರು.
ಕಮಲನಗರ ತಾಲೂಕಿನ ಬಾವಲಗಾಂವ್, ಗಂಗನಬೀಡು ಹಾಗೂ ಹೊಕ್ರಾಣದಲ್ಲಿ ಗ್ರಾಮಗಳಲ್ಲಿ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಕಾರಬಾರಿ ತಾಂಡಾ, ಬಬನ ನಾಯಕ ತಾಂಡಾ, ಚಿಕಲಿ (ಯು), ಚಿರಕಿ ತಾಂಡಾ, ಭೋಪಾಲಗಡ ಹಾಗೂ ಸಾವಳಿ ಗ್ರಾಮಗಳಲ್ಲಿ ತಲಾ 15 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಿದರು.
ಕೆಕೆಆರ್‌ಡಿಬಿ ಯೋಜನೆಯಡಿ 1. 60 ಕೋಟಿರೂ ವೆಚ್ಚದಲ್ಲಿ ಕಮಲನಗರದಲ್ಲಿ ಬಾಲಕಿಯರ ವಸತಿ ನಿಲಯ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
ಈ ವೇಳೆಯಲ್ಲಿ ಮಾತನಾಡಿದ ಅವರು, ಔರಾದ್ ತಾಲೂಕು ಈಗ ಪ್ರಗತಿಯತ್ತ ಸಾಗುತ್ತಿದೆ. ಹಿಂದುಳಿದೆ ತಾಲೂಕ ಎನ್ನುವ ಹಣೆಪಟ್ಟಿ ಕಿತ್ತು ಹಾಕಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನ ಅವಕಾಶ ವಂಚಿತ ಕೆಲವು ಗ್ರಾಮಗಳಲ್ಲಿ ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರು ಸೇರಿದಂತೆ ಹಲವು ಅಧಿಕಾರಿಗಳು ಸಚಿವರಿಗೆ ಭಾಗಿಯಾಗಿದ್ದರು.