ಬೀದರ್: ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಬ್ರೀಮ್ಸ್ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಮಳೆ ಗಾಳಿಗೆ ಕಟ್ಟಡದ ಮೇಲ್ಚಾವಣಿ ಕುಸಿದು ಅವಘಡ ಸಂಭವಿಸಿದೆ. ಇದು ಮೈತ್ರಿ ಸರ್ಕಾರದ ವೈಫಲ್ಯವನ್ನ ತೋರಿಸುತ್ತಿದ್ದು, ಈ ಕುರಿತು ಮೌನವಹಿಸಿದ ಅಧಿಕಾರಿಗಳಿಗೆ ಬಿಜೆಪಿ ಸಂಸದ ಭಗವಂತ ಖೂಬಾ ಅವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಬಿರುಗಾಳಿ ಮಿಶ್ರಿತ ಮಳೆಗೆ ಬ್ರೀಮ್ಸ್ ಆಸ್ಪತ್ರೆಯ ಮೇಲ್ಚಾವಣಿ ಕುಸಿದು ಅವಘಡ ಸಂಭವಿಸಿತ್ತು. ತಡರಾತ್ರಿ ಈ ಘಟನೆ ನಡೆದಿರುವುದರಿಂದ ಭಾರಿ ದುರಂತವೊಂದು ತಪ್ಪಿತ್ತು. ಮಾಜಿ ಸಿಎಂ ಸಿದ್ದರಾಮಯ್ಯನವರ 200 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದರು. ಕಟ್ಟಡ ನಿರ್ಮಾಣವಾದಾಗಿನಿಂದಲೂ ಒಂದಲ್ಲ ಒಂದು ದುರಂತ ನಡೆಯುತ್ತಲೇ ಇದ್ದು, ಅಪೂರ್ಣ ಕಾಮಗಾರಿ, ಲಿಫ್ಟ್ನಲ್ಲಿ ರೋಗಿಗಳ ಸಿಲುಕಿ ಒದ್ದಾಡಿದ್ದು ಸೇರಿದಂತೆ ಬ್ರೀಮ್ಸ್ ಆಸ್ಪತ್ರೆ ದಿನಕ್ಕೊಂದು ಅವಾಂತರಕ್ಕೆ ತುತ್ತಾಗುತ್ತಿದೆ.
ಆರೋಗ್ಯ ಸೇವೆಯಲ್ಲೂ ದಿನಕ್ಕೊಂದು ಯಡವಟ್ಟು ಮಾಡಿಕೊಂಡು ಆಸ್ಪತ್ರೆಯಲ್ಲಿ ವೈದ್ಯರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹಲವಾರು ಬಾರಿ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಇಲ್ಲಿನವರ ದೂರು.
ಇಂದು ಬಿಜೆಪಿ ಸಂಸದ ಭಗವಂತ ಖೂಬಾ ಹಾಗೂ ಸ್ಥಳೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ದುರವಸ್ಥೆ ಕಂಡು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜನರ ಹಣದಿಂದ ನೀವು ಇಲ್ಲಿ ಸಂಬಳ ತಗೊಂಡು ಕೆಲಸ ಮಾಡ್ತಾ ಇದ್ದೀರಿ. ನೀವು ಜನ ಸೇವೆ ಮಾಡಬೇಕಾದವರು. ಆದರೆ ಏನ್ ಮಾಡ್ತಾ ಇದ್ದೀರಾ? ಮನಸ್ಸಿಗೆ ಬಂದ ಹಾಗೆ ಕೆಲಸ ಮಾಡಿ ಜನರ ಜೀವ ತೆಗೆಯುತ್ತೀರಿ ಅಂದ್ರೆ ಸುಮ್ಮನಿರೋಕ್ಕಾಗಲ್ಲ ಎಂದ ಸಂಸದ ಖೂಬಾ, ಬ್ರೀಮ್ಸ್ ನಿರ್ದೇಶಕ ಡಾ. ಕ್ಷೀರಸಾಗರ ಹಾಗೂ ವೈಧ್ಯಾಧಿಕಾರಿ ಡಾ. ವಿಜಯಕುಮಾರ್ ಅಂತೆಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.