ಬೀದರ್: ರಾಜ್ಯಾದ್ಯಂತ ಚಳಿಯ ಅಬ್ಬರ ಹೆಚ್ಚಾಗಿದೆ. ಕಳೆದೊಂದು ವಾರದಿಂದ ಚಳಿ ಅಧಿಕವಾಗಿದ್ದು, ರಾಜ್ಯದ ತುತ್ತತುದಿಯಲ್ಲಿರುವ ಜಿಲ್ಲೆ ಬೀದರ್ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಜನವರಿ 9ರಂದು ಜಿಲ್ಲೆಯಲ್ಲಿ 5.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜನರು ಮನೆಯೊಳಗೇ ಕೂರುವಂತಾಗಿದೆ.
ಮೈ ಕೊರೆಯುವ ಚಳಿಯಿಂದ ರಕ್ಷಣೆ ಪಡೆಯಲು ಮಕ್ಕಳು, ಮಹಿಳೆಯರು, ಹಿರಿಯರು ಬೆಚ್ಚಗಿನ ಬಟ್ಟೆಗಳ ಮೊರೆ ಹೋಗುತ್ತಿದ್ದಾರೆ. ಗುರುವಾರ(ನಿನ್ನೆ) ತಾಪಮಾನ 8 ಡಿಗ್ರಿ ಸೆಲ್ಸಿಯಸ್‍ಗೆ ಇಳಿದಿದೆ. ಶೀತ ವಾತಾವರಣದಿಂದ ರಕ್ಷಿಸಿಕೊಳ್ಳಲು ಜನರು ಮನೆ ಬಾಗಿಲು ಹಾಕಿಕೊಂಡು ಬೆಚ್ಚಗಿರಲು ಪ್ರಯತ್ನಿಸುತ್ತಿದ್ದಾರೆ.
ನಿತ್ಯವೂ ಬೆಳಗ್ಗೆ 4 ಗಂಟೆಯಿಂದಲೇ ಕೆಲಸಕ್ಕೆ ಸಜ್ಜಾಗುವ ಹಾಲು ಮಾರಾಟಗಾರರು, ಪತ್ರಿಕೆ ವಿತರಕರು, ತರಕಾರಿ ವ್ಯಾಪಾರಸ್ಥರು, ಮಾರುಕಟ್ಟೆಗೆ ಬರುವಂತಹ ರೈತರು ಚಳಿಗೆ ತತ್ತರಿಸಿ ಹೋಗುತ್ತಿದ್ದಾರೆ. ವೃದ್ಧರ ಬವಣೆಯಂತೂ ಹೇಳತೀರದು. ಕಳೆದ ಎರಡ್ಮೂರು ದಿನಗಳಿಂದ ಬೆಳಗ್ಗೆ ದಟ್ಟ ಮಂಜು, ಚಳಿಯಿಂದಾಗಿ ಜನರು ಬೆಂಕಿ ಮುಂದೆ ಕುಳಿತುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗುತ್ತಿದೆ.
ಕಳೆದ ವಾರದಿಂದ ಜಿಲ್ಲೆಯಲ್ಲಿ ತಾಪಮಾನವು ಕನಿಷ್ಠ 8 ಡಿಗ್ರಿ ಇಳಿದಿದ್ದು ಚಳಿ ಪ್ರಮಾಣ ಹೆಚ್ಚಾಗಿದೆ. ಬೆಳಗ್ಗೆ ಮೈ ಕೊರೆಯುವ ಚಳಿ ಇದ್ದು ಪ್ರತಿನಿತ್ಯ ವಾಯುವಿಹಾರಕ್ಕೆ ತೆರಳುವ ಜನರ ಸಂಖ್ಯೆ ಕಡಿಮೆಯಾಗಿದೆ. ಮಧ್ಯಾಹ್ನದ ಹೊತ್ತಿಗೆ ತಾಪಮಾನ ಸ್ವಲ್ಪ ಹೆಚ್ಚುತ್ತಿದೆಯಾದರೂ ಸಂಜೆಯಾಗುತ್ತಿದ್ದಂತೆ ಮತ್ತೆ ಇಳಿಕೆಯಾಗುತ್ತಿದೆ. ಗ್ರಾಮೀಣ ಭಾಗ ಸೇರಿದಂತೆ ನಗರ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿದ್ದು ತಮ್ಮ ಬೆಳೆಗಳ ಮೇಲೆ ಬೀರುವ ಪರಿಣಾಮವೂ ಕೂಡಾ ರೈತರ ಆತಂಕಕ್ಕೆ ಕಾರಣವಾಗಿದೆ. ನಾಳೆಯಿಂದ ಹವಾಮಾನ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂಬುದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.
ಹವಾಮಾನ ಇಲಾಖೆ ಹೇಳಿಕೆ: "ಗುರುವಾರ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬರುವ ಎರಡು ದಿನ ಕಡಿಮೆ ತಾಪಮಾನ ಇರಲಿದೆ" ಎಂದು ಹವಾಮಾನ ಇಲಾಖೆ ಅಧಿಕಾರಿ ಬಸವರಾಜ ತಿಳಿಸಿದ್ದಾರೆ. "ಇನ್ನೂ ಎರಡು ದಿನ 6-12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯ ಜನತೆ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು" ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮನವಿ ಮಾಡಿದ್ದಾರೆ. ಬಾಗಲಕೋಟೆಯಲ್ಲಿ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ವಿಜಯಪುರದಲ್ಲಿ 6.5 ಡಿಗ್ರಿ ಸೆಲ್ಸಿಯಸ್, ಬಳ್ಳಾರಿಯಲ್ಲಿ 7.5, ಧಾರವಾಡದಲ್ಲಿ 9.8, ಬೆಳಗಾವಿಯಲ್ಲಿ 10 ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ದಾಖಲಾಗಿದೆ.
ಚಳಿಗೆ ಉತ್ತರ ಭಾರತ ತತ್ತರ: ರಾಜ್ಯದಲ್ಲಿಯೇ ತಾಪಮಾನ ಹೀಗಿದ್ದರೆ, ಉತ್ತರ ಭಾರತದ ಸ್ಥಿತಿಗತಿ ಕೇಳೋದೇ ಬೇಡ. ಚಳಿಯ ಹೊಡೆತಕ್ಕೆ ಕೆಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದೆ. ಚಳಿ ಮೈ ನಡುಗಿಸುದಲ್ಲದೇ ಜನರ ಪ್ರಾಣವನ್ನೂ ತೆಗೆಯುತ್ತಿದೆ. ತೀವ್ರವಾದ ಚಳಿಯ ಪರಿಣಾಮ ಇದುವರೆಗೆ ಕಾನ್ಪುರದಲ್ಲಿ 98 ಮಂದಿ ಹೃದಯಾಘಾತ ಹಾಗು ಕಡಿಮೆ ತಾಪಮಾನದಿಂದ ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ರಾಜ್ಯದ ಹಲವೆಡೆ ಮೈ ಕೊರೆಯುವ ಚಳಿ: ಈ ಜಿಲ್ಲೆಗಳಿಗೆ ಶೀತ ಅಲೆ ಯೆಲ್ಲೋ ಅಲರ್ಟ್!