ಬೀದರ್: ಮುಂಗಾರು ಮಳೆ ಆಗಮನವಾದ ಬೆನ್ನಲ್ಲೆ ಜಿಲ್ಲೆಯಾದ್ಯಂತ ಬಿತ್ತೆನ ಬೀಜಗಳ ಕೊರತೆ ನಡುವೆ ರೈತರು ಭರ್ಜರಿ ಬಿತ್ತನೆ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಭಾಲ್ಕಿ, ಕಮಲನಗರ, ಔರಾದ್, ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಬಿತ್ತನೆ ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ. ಸೋಯಾಬಿನ್ ಬೀಜದ ಕೊರತೆ ನಡುವೆ ಮನೆಯಲ್ಲೆ ಶೇಖರಿಸಿಟ್ಟಿದ್ದ ಉದ್ದು, ಹೆಸರು, ಅವರೆ, ಜೋಳ, ಸೇರಿದಂತೆ ಖಾಸಗಿ ಸೊಯಾಬಿನ್ ಬೀಜಗಳು ಬಿತ್ತನೆ ಮಾಡುವ ಮೂಲಕ ರೈತರು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.
ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಕೊರತೆ: ಜಿಲ್ಲೆಯಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬಿತ್ತನೆ ಬೀಜಗಳ ಕೊರತೆ ವ್ಯಾಪಾಕವಾಗಿ ಉಲ್ಬಣಗೊಂಡಿದೆ. ಅಲ್ಲದೆ ಈಗಾಗಲೆ ವಿತರಣೆ ಮಾಡಿದ ಸೋಯಾಬಿನ್ ಬೀಜಗಳಲ್ಲಿ ಮೊಳಕೆ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ರೈತರು ಕೃಷಿ ಇಲಾಖೆ ನೀಡಿದ ಬೀಜಗಳನ್ನು ತಿರಸ್ಕರಿಸಿ ಪರ್ಯಾಯ ಬೀಜಗಳನ್ನು ಬಳಸಿ ಬಿತ್ತನೆ ಮಾಡುತ್ತಿದ್ದಾರೆ.
ಸೋಯಾಬಿನ್ ಬೀಜಗಳನ್ನು ಸರಬರಾಜು ಮಾಡಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಮೊಬೈಲ್ ನಾಟ್ ರೀಚೆಬಲ್ ಮಾಡಿಕೊಂಡು ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಅಲ್ಲದೆ ಜೋಳ, ಉದ್ದು, ಹೆಸರು, ತೊಗರಿ ಬೀಜಗಳ ವಿತರಣೆಯೂ ಮಾಡದೆ ಕೃಷಿ ಕೇಂದ್ರಗಳು ಬೀಗ ಹಾಕಿಕೊಂಡಿದ್ದು ಜಿಲ್ಲೆಯಾದ್ಯಂತ ರೈತರು ಕೃಷಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಿತ್ತನೆ ಬೀಜ ವಿತರಣೆಗೆ ಆಗ್ರಹ:ಬಿತ್ತನೆ ಬೀಜಗಳ ವಿತರಣೆಯಲ್ಲಿ ಎಡವಟ್ಟು ಮಾಡಿಕೊಂಡ ಕೃಷಿ ಇಲಾಖೆ ಅಧಿಕಾರಿಗಳು ಸಮರ್ಪಕ ಬೀಜಗಳ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ಗೊಂದಲದಲ್ಲಿರುವ ರೈತರಿಗೆ ಅಗತ್ಯ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.