ಬಸವಕಲ್ಯಾಣ(ಬೀದರ್): ಜಾತ್ರೆ ನಿಮಿತ್ತ ಬಂದೋಬಸ್ತ್ಗಾಗಿ ನಿಯೋಜನೆಗೊಂಡಿದ್ದ ಎಎಸ್‌ಐವೋರ್ವರು ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಮಂಠಾಳನಲ್ಲಿ ನಡೆದಿದೆ.
ಲಕ್ಷ್ಮಣರಾವ ಮಾನೆ (58) ಎಂಬುವರೆ ಮೃತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಹಾರಕೂಡ ಜಾತ್ರೆ ನಿಮಿತ್ತ ಬಂದೋಬಸ್ತ್ಗಾಗಿ ಲಕ್ಷ್ಮಣರಾವಗೆ ಶನಿವಾರ ತಡ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದವರಾಗಿದ್ದ ಲಕ್ಷ್ಮಣರಾವ್ ಈ ಹಿಂದೆ ಇಲ್ಲಿಯ ನಗರ ಠಾಣೆ, ಸಂಚಾರಿ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಕೆಲ ತಿಂಗಳ ಹಿಂದೆ ಮಂಠಾಳ ಠಾಣೆಗೆ ವರ್ಗಾವಣೆಗೊಂಡು ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಕೆಲ ದಿನಗಳ ಹಿಂದೆಯಷ್ಟೇ ಇವರನ್ನು ಎಎಸ್‌ಐ ಹುದ್ದೆಗೆ ಬಡ್ತಿ ನೀಡಿ ಬೀದರ್ನ ಗಾಂಧಿ ಗಂಜ್ ಠಾಣೆಗೆ ವರ್ಗಾವಣೆಗೊಳಿಸಲಾಗಿತ್ತು. ಆದರೆ ಲಕ್ಷ್ಮಣರಾವ್ ಜಾತ್ರೆ ಬಂದೋಬಸ್ತ್ಗಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರಣ ಪೇದೆ ಹುದ್ದೆಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿರಲಿಲ್ಲವಂತೆ. ಎಎಸ್‌ಐ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ದುರಂತ ಸಂಭವಿಸಿದೆ.