ಬಸವಕಲ್ಯಾಣ: ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಅಭಿವೃದ್ಧಿ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ. ಈ ಇಲಾಖೆಯಲ್ಲಿ ಕೆಲಸ ಮಾಡುವವರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಆಗದವರು ತಕ್ಷಣ ಜಾಗ ಖಾಲಿ ಮಾಡಬೇಕೆಂದು ಶಾಸಕ ಬಿ. ನಾರಾಯಣರಾವ ಖಡಕ್ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಯಾವ ಊರಲ್ಲಿ ಗುಡಿ, ಗುಂಡಾರಗಳು ಹೇಗಿವೆ ಅಂತ ನಾನು ನೋಡಲ್ಲ. ಅಲ್ಲಿನ ಶಾಲೆ ಹೇಗಿದೆ ಅಂತ ನೋಡುವೆ. ಊರಲ್ಲಿ ಪೀಠಾಧಿಪತಿ ಎಂಥವರಿದ್ದಾರೆ ಅನ್ನೋದು ನನಗೆ ಬೇಕಾಗಿಲ್ಲ, ಅಲ್ಲಿನ ಶಿಕ್ಷಕರು ಎಂಥವರಿದ್ದಾರೆ ಅನ್ನೋದನ್ನು ಮಾತ್ರ ನಾನು ನೋಡುವೆ ಎಂದು ತಿಳಿಸಿದರು.
ಶಾಲೆ ಚನ್ನಾಗಿದ್ರೆ ಆ ಊರಿನ ದರಿದ್ರ ದೂರವಾಗುತ್ತೆ. ಆದ್ರೆ ಶಿಕ್ಷಕರಿಗೆ ಮಕ್ಕಳ ಅಭ್ಯಾಸ, ಶಾಲೆಯ ಅಭಿವೃದ್ಧಿ ಬಗ್ಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಹೀಗಾದರೆ ಗ್ರಾಮಗಳು ಉದ್ದಾರ ಆಗೋದು ಯಾವಾಗ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡರು.
ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಅಲ್ಲದೆ ಶಾಲೆ ಮೂಲ ಸೌಕರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ತಕ್ಷಣ ಅನುದಾನ ಕಲ್ಪಿಸಲಾಗುವುದು ಎಂದು ತಿಳಿಸಿದರು. ಅನಿರೀಕ್ಷಿತ ಭೇಟಿ ನೀಡಲಾಗುವುದು ಎಂದು ಎಚ್ಚರಿಸಿದರು.
ಬಿಇಓ ಸಿ.ಜಿ. ಹಳ್ಳದ ಮಾತನಾಡಿ, ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಈಗಾಗಲೇ ಕಾರ್ಯಗಾರ ನಡೆಸಲಾಗಿದೆ. ಫೋನ್ ಇನ್ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ತಹಶಶೀಲ್ದಾರ ಸಾವಿತ್ರಿ ಸಲಗರ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ್ ಪಾಟೀಲ್, ಇಒ ಮಡೋಳಪ್ಪ ಪಿ.ಎಸ್ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಇಲಾಖಾವಾರು ವರದಿ ಒಪ್ಪಿಸಿದರು.