ಬಸವಕಲ್ಯಾಣ: ಮಾರಕ ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ವ್ಯವಸ್ಥೆಯಿಂದ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ತಾಲೂಕಿನ ಬೆಟಬಾಲಕುಂದಾ ಗ್ರಾಪಂನಿಂದ ಗ್ರಾಮದ ವ್ಯಾಪ್ತಿಯ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಬುಧವಾರ ತಾಪಂ ಇಒ ಮಡೋಳಪ್ಪ ಪಿ.ಎಸ್, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕಾರ್ಮಿಕರ ಆರೋಗ್ಯ ಸುರಕ್ಷತೆಗೆ ಕಾಳಜಿ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಕೆಲಸ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲಿದ್ದ ಪಿಡಿಒ ಅವರಿಗೆ ಸೂಚಿಸಿದರು.
ಇದೇ ವೇಳೆ, ಗ್ರಾಮಕ್ಕೆ ನೀರು ಪೂರೈಕೆ ಮಾಡುವ ತೆರೆದ ಬಾವಿಗೆ ಭೇಟಿ ನೀಡಿ ಪರಿಶೀಲಿಸಿದ ಇಒ ಅವರು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಉದ್ಯೋಗ ಖಾತರಿ ಯೋಜನೆ ತಾಲೂಕು ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್, ಪಿಡಿಒ ರಮೇಶ ರಾಠೋಡ್, ವಿನೋದರೆಡ್ಡಿ ಉಪಸ್ಥಿತರಿದ್ದರು.