ಬೀದರ್: ಸೋಮವಾರದಿಂದ ಜಿಲ್ಲೆಯಲ್ಲಿ ಸೇನಾ ಭರ್ತಿ ರ‍್ಯಾಲಿ ನಗರದ ನೆಹರೂ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಜಿಲ್ಲಾಡಳಿತದ ವತಿಯಿಂದ ಬ್ಯಾರಿಕೇಡ್, ಶ್ಯಾಮಿಯಾನ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಹಾಗೂ ಸೇನಾ ನೇಮಕಾತಿ ರ‍್ಯಾಲಿಗೆ ಬೇಕಾಗುವ ಎಲ್ಲಾ ಅಗತ್ಯ ಸೌಕರ್ಯಗಳು ಮಾಡಲಾಗಿದೆ.
ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಗಾಗಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಮತ್ತು ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದೆ.
ವಿವಿಧ ಇಲಾಖೆಗಳಿಂದ ನೆರವು: ನಗರಸಭೆ, ಲೋಕೋಪಯೋಗಿ ಇಲಾಖೆ, ಕ್ರೀಡಾ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸೈನಿಕ ಕಲ್ಯಾಣ ಇಲಾಖೆಗಳು ಈ ಸೇನಾ ನೇಮಕಾತಿ ರ‍್ಯಾಲಿಗೆ ಸಹಕಾರ ನೀಡಲಿವೆ. ಗುರುದ್ವಾರದ ವತಿಯಿಂದ ರ‍್ಯಾಲಿಗೆ ಬರುವ ಅಭ್ಯರ್ಥಿಗಳಿಗಾಗಿ ಉಚಿತ ಊಟದ ವ್ಯವಸ್ಥೆ ಮತ್ತು ಕಡಿಮೆ ವೆಚ್ಚದಲ್ಲಿ ಅವರಿಗೆ ವಸತಿಯನ್ನು ಕಲ್ಪಿಸಲಾಗುತ್ತಿದೆ.
ಡಿಸೆಂಬರ್ 5 ರಂದು ಬೆಳಗ್ಗೆ 4 ಗಂಟೆಯಿಂದಲೇ ಅಭ್ಯರ್ಥಿಗಳು ಕ್ರೀಡಾಂಗಣಕ್ಕೆ ಬರಲು ಆರಂಭಿಸುವವರು ಬೆಳಗ್ಗೆ 6 ಗಂಟೆಗೆ ರನ್ನಿಂಗ್ ಆರಂಭವಾಗಿ 8 ಗಂಟೆಗೆ ಮುಕ್ತಾಯವಾಗಿ ನಂತರ ಇತರೇ ಪ್ರಕ್ರಿಯೆಗಳು ನಡೆಯಲಿವೆ.
ಬೀದರ್ನಲ್ಲಿ ಅಗ್ನಿಪಥ್ ಮೊದಲ ರ‍್ಯಾಲಿ: ಅಭ್ಯರ್ಥಿಗಳ ದೈಹಿಕ ಪರೀಕ್ಷೆ, ಮೆಡಿಕಲ್ ಪರೀಕ್ಷೆ, ಸಾಮಾನ್ಯಜ್ಞಾನ ಮತ್ತು ಮೆಂಟಲ್ ಎಬಿಲಿಟಿ ಸೇರಿದಂತೆ ಭಾರತೀಯ ಸೇನಾ ನೇಮಕಾತಿ ನಿಯಮದಂತೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಶುಭಾಶಯ ತಿಳಿಸಿದ ಜಿಲ್ಲಾಧಿಕಾರಿ: ನಮ್ಮ ಭಾಗದ ಹೆಚ್ಚಿನ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು. ಈ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು, ಈ ರ‍್ಯಾಲಿಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಡಿಸಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೀದರ್ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನ