ಬೀದರ್: ವಿಧಾನಸಭಾ ಚುನಾವಣೆ ಹಿನ್ನೆಲೆ ಬೀದರ ಜಿಲ್ಲಾದ್ಯಾಂತ ಗಡಿ ಪ್ರದೇಶದಲ್ಲಿ 30 ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಗಡಿ ನಿಯಂತ್ರಣ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಮಹಾರಾಷ್ಟ್ರದಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ ಮಾಡಿ ಗಡಿ ಪ್ರವೇಶ ಒಳಗೆ ಅವಕಾಶ ಮಾಡಲಾಗ್ತಿದೆ.
ಇನ್ನು ವನಮಾರಪಳ್ಳಿ ಚೆಕ್ ಪೋಸ್ಟ್ನಲ್ಲಿ ಅಪಾರ ಪ್ರಮಾಣದ ಹೆಣ್ಣು ಮಕ್ಕಳ ಬೆಳ್ಳಿ ಕಾಲುಂಗರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಿನ್ನೆಲೆ 1 ಕೋಟಿ ಐವತ್ತು ಸಾವಿರ ರೂಪಾಯಿ ಬೆಲೆ ಬಾಳುವ ಬೆಳ್ಳಿ ಕಾಲುಂಗರವನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುಮಾರು ಎಂಟು ಬ್ಯಾಗ್ಗಳಲ್ಲಿ ಬೆಳ್ಳಿ ಕಾಲುಂಗರಗಳನ್ನು ತುಂಬಲಾಗಿದ್ದು, ಸುಮಾರು 140 ಕೆಜಿಗೂ ಹೆಚ್ಚು ತೂಕವಿದೆ ಎನ್ನಲಾಗ್ತಿದೆ. ಇದನ್ನು ಸಾಗಿಸುತ್ತಿದ್ದ ಕಾರಿನ ಮಾಲೀಕರು ನಿಖರ ಮಾಹಿತಿ ನೀಡದ ಹಿನ್ನೆಲೆ ಈ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿದ್ದಾರೆ. ಈ ಘಟನೆ ಕುರಿತು ಔರದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಯಾವುದೇ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ನಗದು ಹಾಗೂ ಬೆಳ್ಳಿ ಆಭರಣಗಳು ರಾಜ್ಯಕ್ಕೆ ಬರುತ್ತಿದೆ. ಅಕ್ರಮವಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬೆಳ್ಳಿ ಆಭರಣಗಳನ್ನು ಸಾಗಿಸಲಾಗುತ್ತಿದ್ದು, ಅನಿಲ್, ಗಜಾನನ, ರಾಹುಲ್ ವಿರುದ್ಧ FIR ದಾಖಲಾಗಿದೆ. ದಾಖಲೆ ಇಲ್ಲದೇ ಬೆಳ್ಳಿ ಕಾಲ ಉಂಗುರ ಪೊಲೀಸ್ ಇಲಾಖೆ ಜಪ್ತಿ ಮಾಡಿದ್ದು, ಬೆಳ್ಳಿ ಕಾಲ ಉಂಗುರಗಳು ಸಾರ್ವತ್ರಿಕ ಚುನಾವಣೆಯಲ್ಲಿ ಹೆಣ್ಣು ಮಕ್ಕಳಿಗೆ ಹಂಚಲು ತಂದಿದ್ದ ಅಥವಾ ವ್ಯಾಪಾರ ಮಾಡಲು ತಂದಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ.
7.91 ಕೋಟಿ ರೂ.ಮೌಲ್ಯದ ವಸ್ತುಗಳು ವಶ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಈವರೆಗೆ 7.91 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ತಿಳಿಸಿದ್ದಾರೆ.
ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಜಿಲ್ಲಾದ್ಯಂತ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಡಿಎಸ್‍ಪಿ, ಸಿಪಿಐ, ಪಿಎಸ್‍ಐ ಹಾಗೂ ಸಿಬ್ಬಂದಿಗಳು ತೀವ್ರ ನಿಗಾವಹಿಸಿದ್ದು, ಅಕ್ರಮವಾಗಿ ಸಾಗಿಸುತ್ತಿರುವ ದಾಖಲೆ ರಹಿತ 2.6 ಕೋಟಿ ನಗದು ಹಣ, 10 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಸರಾಯಿ, 35 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯಗಳು, 93 ಲಕ್ಷ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ವಸ್ತುಗಳು, ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದ 3.91 ಕೋಟಿ ರೂ. ಮೌಲ್ಯದ ಬಟ್ಟೆ ಹಾಗೂ ಗೃಹ ಬಳಕೆಯ ವಸ್ತುಗಳು ಸೇರಿದಂತೆ 7.91 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಓದಿ: ಚುನಾವಣಾ ಅಕ್ರಮ : ರಾಜ್ಯದಲ್ಲಿ 22 ಕೋಟಿ ರೂ. ನಗದು, 23 ಕೆಜಿ ಚಿನ್ನ ವಶಕ್ಕೆ