ಬೀದರ್: ಬಸವಣ್ಣನ ಕರ್ಮ ಭೂಮಿ, 12ನೇ ಶತಮಾನದಲ್ಲಿ ವಚನಗಳ ಕ್ರಾಂತಿ ಮಾಡಿ ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಅನುಭವ ಮಂಟಪ ನಿರ್ಮಾಣಕ್ಕೆ ಮೊದಲ ಹಂತವಾಗಿ ಬಜೆಟ್ನಲ್ಲಿ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ರಂಗಮಂದಿರ ನಾಮಕರಣ ಸಮಾರಂಭದಲ್ಲಿ ಮಾತನಾಡಿದ ಅವರು, ಗೊ.ರು ಚನ್ನಬಸವ ಸಮಿತಿ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 600 ಕೋಟಿ ರೂ ಬೇಡಿಕೆ ಇಟ್ಟಿದೆ. ಅದರಂತೆ 100 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಸಚಿವ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಅನುಭವ ಮಂಟಪದ ಕಾರ್ಯ ವ್ಯವಸ್ಥಿತವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್, ಸಂಸದ ಭಗವಂತ ಖೂಬಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಬಂಡೆಪ್ಪ ಕಾಶೆಂಪೂರ್, ರಹಿಂಖಾನ್, ರಾಜಶೇಖರ್ ಪಾಟಿಲ್, ಬಿ.ನಾರಾಯಣರಾವ್ ಇದ್ದರು.