ಬಳ್ಳಾರಿ: ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಯುವಕನೊಬ್ಬನ ಜೀವನ ದುರಂತ ಅಂತ್ಯ ಕಂಡಿದೆ. ಪೋಷಕರ ವಿರೋಧದ ಮಧ್ಯೆ ಮನೆ ಬಿಟ್ಟು ಓಡಿಹೋದ ಪ್ರೇಮಿಗಳನ್ನು ಹುಡುಕಿದ ಪೋಷಕರು ಅವರನ್ನು ಬೇರ್ಪಡಿಸಿ ಅವರರವರ ಮನೆಗೆ ಕರೆದುಕೊಂಡು ಹೋಗ್ತಾರೆ. ಈ ವೇಳೆ ಹುಡುಗಿ ಕಡೆಯವರು ಯುವಕನ್ನು ಥಳಿಸಿ ವಿಡಿಯೋ ತೆಗೆದ ಹಿನ್ನೆಲೆ ಆ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿಗೆ ಆಪ್ರಾಪ್ತೆಯನ್ನು ಪ್ರೀತಿಸಿ ಕರೆದುಕೊಂಡು ಹೋದ ಯುವಕನು ಕಾರಣವೇ? ಅಥವಾ ಹೊಡೆದು ವಿಡಿಯೋ ಮಾಡಿದ ಪೋಷಕರ ಕಡೆಯವರು ಕಾರಣವಾ? ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ.
ತೋರಣಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿ ಮತ್ತು ಸಂಡೂರು ತಾಲೂಕಿನ ತಿಮ್ಮಲಾಪುರ ಗ್ರಾಮದ ಗಂಗಾಧರ ಕಳೆದ ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈ ವಿಷಯ ಮನೆಯಲ್ಲಿ ಗೊತ್ತಾಗಿ ಇಬ್ಬರನ್ನು ಬೇರೆ ಬೇರೆ ಇರುವಂತೆ ವಾರ್ನಿಂಗ್ ಮಾಡಿರುತ್ತಾರೆ. ಆದರೆ ಇನ್ನೇನು ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲು ಆಗೋದಿಲ್ಲ ಅನ್ನೋ ಸ್ಥಿತಿಗೆ ಬಂದಾಗ ಇಬ್ಬರು ಮನೆಬಿಟ್ಟು ಓಡಿ ಹೋಗ್ತಾರೆ.
ಬೇಸತ್ತ ಗಂಗಾಧರ ಆತ್ಮಹತ್ಯೆ.. ಆಗ ಯುವತಿಯ ಪೋಷಕರು ತೋರಣಗಲ್ ಠಾಣೆಯಲ್ಲಿ ಕಿಡ್ನಾಪ್ ಯುವತಿ ಪ್ರಕರಣವನ್ನು ದಾಖಲು ಮಾಡುತ್ತಾರೆ. ಒಂದೆರಡು ದಿನಗಳ ನಂತರ ಕೂಡ್ಲಿಗಿ ತಾಲೂಕಿನ ಗ್ರಾಮವೊಂದರಲ್ಲಿ ಇಬ್ಬರು ಪತ್ತೆಯಾಗುತ್ತಾರೆ. ಆಗ ಯುವತಿಯನ್ನು ಕರೆದುಕೊಂಡು ಹೋದ ಪೋಷಕರು ಗಂಗಾಧರನಿಗೆ ಹಿಗ್ಗಾಮುಗ್ಗ ಥಳಿಸುತ್ತಾರೆ. ಅದನ್ನು ವಿಡಿಯೋ ಚಿತ್ರಣ ಕೂಡ ಮಾಡುತ್ತಾರೆ. ವಿಡಿಯೋ ವೈರಲ್ ಆಗೋ ಭೀತಿಯಿಂದ ಬೇಸತ್ತ ಗಂಗಾಧರ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಸಾವನ್ನಪ್ಪಿದ್ದಾನೆ.
ಇನ್ನೂ ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಾದರೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾರೆ ಅನ್ನೋದು ಕುಟುಂಬಸ್ಥರ ವಾದವಾಗಿದೆ. ಹೀಗಾಗಿ, ಈ ಬಗ್ಗೆ ಕೂಡ್ಲಿಗಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅಲ್ಲದೇ ಯುವತಿಯನ್ನು ಕರೆದುಕೊಂಡು ಹೋಗೋವಾಗ ಗಂಗಾಧರನನ್ನು ಥಳಿಸಿರೋದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ್ರೆ ಮರ್ಯಾದೆ ಹೋಗ್ತದೆ ಅನ್ನೋ ಕಾರಣಕ್ಕೆ ಗಂಗಾಧರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಲಕಿ ಮನೆಯವರೇ ಹೊಡೆದು ವಿಷ ಕುಡಿಸಿರುವ ಆರೋಪ.. ಹೀಗಾಗಿ, ಗಂಗಾಧರ ವಿಷ ಕುಡಿದಿರೋದಲ್ಲ ಬಾಲಕಿಯ ಕಡೆಯವರೇ ಹೊಡೆದು ವಿಷ ಕುಡಿಸಿದ್ದಾರೆಂದು ಕೂಡ ಗಂಗಾಧರ ಕಡೆಯವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮಾಡುತ್ತಿರುವುದಾಗಿ ವಿಜಯನಗರ ಎಸ್ಪಿ ಅರುಣ್ ಕುಮಾರ ಮಾಹಿತಿ ನೀಡಿದ್ದಾರೆ.
ಓದಿ: ಟಿಕೆಟ್ ಬಗ್ಗೆ ಸಿದ್ದು- ಡಿಕೆಶಿ ದೂಷಿಸಬೇಡಿ, ಆಂತರಿಕ ಅಸಮಾಧಾನದಿಂದ ಪಕ್ಷಕ್ಕೆ ಹಾನಿ: ಸುರ್ಜೇವಾಲಾ ಪಾಠ