ಬಳ್ಳಾರಿ : ಪ್ಲಾಸ್ಟಿಕ್ ಮುಂದಿನ 600 ವರ್ಷಗಳ ಕಾಲ ನೆಲದಲ್ಲಿ ಹೂತಿಟ್ಟರೂ ಕರಗದ ಭಯಾನಕ ವಸ್ತು. ಹಾಗಾಗಿ ಮೊದಲು ನಾವೆಲ್ಲ ಈ ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ತ್ಯಜಿಸಬೇಕೆಂದು ಬೆಂಗಳೂರಿನ ಇಸ್ರೋದ ನಿವೃತ್ತ ಹಿರಿಯ ವಿಜ್ಞಾನಿ ಡಾ.ಸಿ.ಡಿ.ಪ್ರಸಾದ್ ಹೇಳಿದರು.
ನಗರದ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ವಿಜ್ಞಾನಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡೋದರಿಂದ ನಮ್ಮ ಸುತ್ತಲಿನ ಪರಿಸರಕ್ಕೂ ಹಾನಿ ಉಂಟಾಗಲಿದೆ. ಪ್ಲಾಸ್ಟಿಕ್ ಬಳಕೆ ಮಾಡಿ ಕಸದ ರಾಶಿಯೊಳಗೆ ಬಿಸಾಡಿದಾಗ ಅದನ್ನು ತಿಂದ ಜಾನುವಾರುಗಳು ಸಾವನ್ನಪ್ಪುತ್ತಿವೆ. ಕೆರೆಯಲ್ಲಿ ಬಿಸಾಡಿದ್ರೆ ಮೀನು ಸೇರಿದಂತೆ ಇತರೆ ಜಲಚರ ಪ್ರಾಣಿಗಳು ತಿಂದು ಸಾವನ್ನಪ್ಪುತ್ತಿವೆ. ಹಾಗಾಗಿ ಪ್ಲಾಸ್ಟಿಕ್ ನಿಷೇಧಿಸಬೇಕಿದೆ ಎಂದು ಸಲಹೆ ನೀಡಿದರು.
ಈ ಪ್ಲಾಸ್ಟಿಕ್ ಬಳಕೆ ಮಾಡೋದು ನಮಗೆ ದೇವರು ಕೊಟ್ಟ ವರ. ನಾವು ಕುಳಿತುಕೊಳ್ಳುವ ಕುರ್ಚಿಗಳು, ಸೋಪಾಸೆಟ್ಗಳೂ ಕೂಡ ಪ್ಲಾಸ್ಟಿಕ್ನಿಂದಲೇ ತಯಾರಿಸಲಾಗುತ್ತದೆ. ಆದರೆ ಈ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡೋದನ್ನು ಮಾತ್ರ ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ನಿಷೇಧಿಸಬೇಕು. ತರಕಾರಿ ಅಥವಾ ಇನ್ನಿತರೆ ಮಾರುಕಟ್ಟೆಯಲ್ಲಿ ಕಾಣಸಿಗುವ ಪ್ಲಾಸ್ಟಿಕ್ ಬ್ಯಾಗ್ಗಳ ಖರೀದಿಗೆ ಯಾರೊಬ್ಬರೂ ಮುಂದಾಗಬಾರದು. ಮಾರುಕಟ್ಟೆಗೆ ತೆರಳುವ ಮುನ್ನ ನಾವೆಲ್ಲರೂ ಕಾಟನ್ ಬಟ್ಟೆಯ ಕೈಚೀಲವನ್ನು ಮನೆಯಿಂದಲೇ ತೆಗೆದುಕೊಂಡು ಹೋಗಬೇಕೆಂದು ಎಂದು ಮನವಿ ಮಾಡಿದರು.
ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯೋದೆ ದೊಡ್ಡ ಸಾಧನೆಯಲ್ಲ:
ಎಸ್ಎಸ್ಎಲ್ಸಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯೋದೆ ದೊಡ್ಡ ಸಾಧನೆಯಲ್ಲ. ಆಳವಾದ ಅಧ್ಯಯನದಿಂದ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು. ಹೆಚ್ಚಿನ ಅಂಕ ಪಡೆಯೋದಕ್ಕಿಂತಲೂ ಸಾಮಾನ್ಯ ಜ್ಞಾನದ ಅವಶ್ಯಕತೆ ಇಂದಿನ ವಿದ್ಯಾರ್ಥಿಗಳಲ್ಲಿ ಅತ್ಯಗತ್ಯವಾಗಿದೆ ಎಂದರು.
ಈ ವೇಳೆ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಪ್ರೊ.ಬಿ.ಗೋವಿಂದರಾಜ, ಕಾರ್ಯದರ್ಶಿ ಕೆ.ರಾಮಣ್ಣ, ಸದಸ್ಯರಾದ ಗಿರೀಶ ಕಡ್ಲೇವಾಡ, ಹೆಚ್.ಜಿ.ಹುದ್ದಾರ್, ಸಂಘಟಕ ಎಸ್.ಎಂ.ಕೊಟ್ರುಸ್ವಾಮಿ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಏಚರೆಡ್ಡಿ ಸತೀಶ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ, ಗಂಗಾವತಿ ವೀರೇಶ, ಹಿರಿಯ ಮುಖಂಡ ಅರವಿ ಬಸವನಗೌಡ ಇದ್ದರು.