ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಬಳ್ಳಾರಿ ಮಹಾನಗರದ ಬಹುತೇಕ ಆಶ್ರಯ - ಸ್ಲಂ ಬೋರ್ಡ್ ಮನೆಗಳು ಭಾರೀ ತೊಂದರೆಗೀಡಾಗುತ್ತಿವೆ.
ಬಳ್ಳಾರಿಯ ಬಹುತೇಕ ವಾರ್ಡ್ಗಳಲ್ಲಿ ಸ್ಲಂ ಬೋರ್ಡ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಶ್ರಯ ಮನೆಗಳನ್ನ ನಿರ್ಮಿಸಿಕೊಡಲಾಗಿದೆಯಾದ್ರೂ, ಅವುಗಳ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಲ್ಲದೇ ಮಳೆ ಸುರಿದಾಗ ರಾಜಕಾಲುವೆಯಿಂದ ರಭಸವಾಗಿ ಹರಿಯುವ ನೀರು ಮನೆಗಳಿಗೆ ನುಗ್ಗುತ್ತದೆ. ಆ ಮನೆಗಳಲ್ಲಿ ವಾಸಿಸುತ್ತಿರುವ ಬಡ - ಕೂಲಿ ಕಾರ್ಮಿಕರ ಪಾಡು ಹೇಳತೀರದಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆಗಳ ನಿರ್ವಹಣೆಗೆ ಸಮರ್ಪಕ ಅನುದಾನ ಬಿಡುಗಡೆ ಮಾಡಲಾಗಿದ್ದು, ಆ ಮನೆಗಳು ಸ್ಪಲ್ಪ ಸರಿಯಿವೆ. ಆದರೆ ಸ್ಲಂ ಬೋರ್ಡ್ ಮನೆಗಳು ತೀರಾ ಕಳಪೆಯಾಗಿವೆ. ಕೆಲ ಮನೆಗಳು ವಾಸಿಸಲು ಯೋಗ್ಯವಲ್ಲದ ರೀತಿಯಲ್ಲಿವೆ. ಇಂತಹ ಸಂದಿಗ್ಧ ಪರಿಸ್ಥಿತಿ ಗಣಿ ನಗರಿ ಬಳ್ಳಾರಿಗೆ ಎದುರಾಗಿದೆ.