ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಳೆ ನಡೆಯಲಿದ್ದು ಸಿದ್ದತಾ ಕೆಲಸಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ರು.
ಮತ ಎಣಿಕೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮತ ಎಣಿಕೆ ಬೆಳಗ್ಗೆ 8ಕ್ಕೆ ಆರಂಭವಾಗಲಿದ್ದು, ವೀಕ್ಷಕರು, ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಯಂತ್ರಗಳಿರಿಸಲಾದ ಕೊಠಡಿಗಳನ್ನು ತೆರೆಯಲಾಗುತ್ತದೆ. ನಂತರ ಮತ ಯಂತ್ರಗಳನ್ನು ಮತ ಎಣಿಕಾ ಕೋಣೆಗೆ ತರಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೈಗೊಳ್ಳಲಾಗಿರುವ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಮತ ಎಣಿಕೆಗೆ 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದ್ದು, 17 ಸುತ್ತುಗಳಲ್ಲಿ ನಡೆಯಲಿದೆ. ಎಣಿಕಾ ಕೇಂದ್ರದೊಳಗೆ ಮೊಬೈಲ್ಗಳನ್ನು ನಿಷೇಧಿಸಲಾಗಿದ್ದು, ಗೇಟ್ ಬಳಿಯೇ ಅವುಗಳನ್ನಿಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಡೀ ಮತ ಎಣಿಕೆ ದಿನದಂದು ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ ಎಂದು ತಿಳಿಸಿದ್ರು.
ಪೊಲೀಸ್ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ 425 ಜನರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸಿಐಎಸ್ಎಫ್ ಒಂದು ತುಕಡಿ ಭದ್ರತೆಗೆ ನಿಯೋಜಿಸಲಾಗಿದೆ ಎಂದರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸುತ್ತ 1ಕಿ.ಮೀ ವ್ಯಾಪ್ತಿಯಲ್ಲಿ ಡಿ.9ರಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಸರಬರಾಜು, ಮಾರಾಟ ನಿಷೇಧಿಸಲಾಗಿದೆ ಎಂದಿದ್ದಾರೆ.
ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನ ರೆಡ್ಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಉಪಸ್ಥಿತರಿದ್ದರು.