ಬಳ್ಳಾರಿ : ನೂತನ ವಿಜಯನಗರ ಜಿಲ್ಲೆಗೆ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದ ಅನುದಾನವು ಅತೀ ವಿರಳವಾಗಲಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ. ನೂತನ ವಿಜಯನಗರ ಜಿಲ್ಲೆ ರಚನೆಯಾದಾಗಿನಿಂದಲೂ ಇಂಥದೊಂದು ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಅರ್ಥಶಾಸ್ತ್ರಜ್ಞರು ಹಾಗೂ ಗಣಿ ಮಾಲೀಕರಲ್ಲೂ ಕೂಡ ಇಂತಹ ಪ್ರಶ್ನೆ ಕಾಡುತ್ತಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಚನೆಯಾದ ಸಿಇಒ ವರದಿಯನ್ವಯ ಗಣಿಬಾಧಿತ ಪ್ರದೇಶಗಳಲ್ಲಿನ ಪುನರುಜ್ಜೀವನ ಮತ್ತು ಪುನರುತ್ಥಾನ(ಆರ್ಅಂಡ್ಆರ್)ಮಾಡುವ ಸಲುವಾಗಿ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನವನ್ನ ಸ್ಥಾಪಿಸಲಾಗಿದೆ. ಅದರೊಳಗೆ ಬಳ್ಳಾರಿ, ಹೊಸಪೇಟೆ ಹಾಗೂ ಸಂಡೂರು ತಾಲೂಕನ್ನ ಕೇಂದ್ರವನ್ನಾಗಿಸಿಕೊಂಡು ಡಿಎಂಎಫ್ ಸ್ಥಾಪಿಸಲಾಗಿದೆ.
ಆದರೆ, ಅಖಂಡ ಬಳ್ಳಾರಿ ಜಿಲ್ಲೆ ಇರೋವಾಗ ಈ ಸಮಸ್ಯೆ ಎದುರಾಗಿಲ್ಲ. ಆದರೀಗ ನೂತನ ವಿಜಯನಗರ ಜಿಲ್ಲೆ ಘೋಷಣೆ ಬಳಿಕ ಈ ಸಮಸ್ಯೆ ಎದುರಾಗುವ ಸಂಭವ ಇದೆ. ಮೂರು ತಾಲೂಕುಳಿಗೆ ಶೈಕ್ಷಣಿಕ-ಆರೋಗ್ಯ ಮತ್ತು ಅಗತ್ಯ ಸೌಲಭ್ಯ ಕಲ್ಪಿಸೋದೇ ಇದರ ಮೂಲ ಉದ್ದೇಶ ಆಗಿತ್ತು.
ಬಳ್ಳಾರಿ ಜಿಲ್ಲಾ ಕೇಂದ್ರ ವ್ಯಾಪ್ತಿಗೆ ಬಳ್ಳಾರಿ ಮತ್ತು ಸಂಡೂರು ತಾಲೂಕು ಬರೋದ್ರಿಂದ ಉಭಯ ತಾಲೂಕುಗಳಿಗೆ ಇನ್ಮುಂದೆ ಹೆಚ್ಚಿನ ಅನುದಾನ ದೊರಕುವ ಸಾಧ್ಯತೆಯಿದೆ. ವಿಜಯನಗರ ಜಿಲ್ಲಾ ಕೇಂದ್ರಕ್ಕೆ ಹೊಸಪೇಟೆ ತಾಲೂಕು ಬರೋದರಿಂದ ಅತೀ ವಿರಳ ಅನುದಾನ ದೊರಕುವ ಸಾಧ್ಯತೆಯಿದೆ.
ನೂತನ ವಿಜಯನಗರ ಜಿಲ್ಲೆ ಘೋಷಣೆಯಾದ ಬಳಿಕ, ಆಡಳಿತಾತ್ಮಕವಾಗಿಯೂ ಕೂಡ ಕೊಂಚಮಟ್ಟಿಗೆ ಸಮಸ್ಯೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ, ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ನ ಐವರು ಹಾಗೂ ಬಿಜೆಪಿಯ ಆರು ಮಂದಿ ಶಾಸಕರಿದ್ದಾರೆ. ಇಬ್ಬರು ಎಂಎಲ್ಸಿ ಹಾಗೂ ಒಬ್ಬ ಸಂಸದರು ಇದ್ದಾರೆ. ಮೆಜಾರಿಟಿ ಜನಪ್ರತಿನಿಧಿಗಳು ಬಿಜೆಪಿಗರೇ ಇದ್ದಾರೆ.
ಆದರೂ, ನೂತನ ವಿಜಯನಗರ ಜಿಲ್ಲೆ ಘೋಷಣೆಗೆ ಬಿಜೆಪಿಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಡಿಎಂಎಫ್ ಅನುದಾನ ಹಂಚಿಕೆ ವಿಚಾರದಲ್ಲಿ ಶಾಸಕರ ಒಮ್ಮತದ ಅಭಿಪ್ರಾಯ ಕಡ್ಡಾಯವಾಗಿ ಬೇಕಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಇದೀಗ ಹೊಸ ತಲೆನೋವು ಶುರುವಾಗಲಿದೆ.