ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ, ಕರಡಿಹಳ್ಳಿ, ಕಡೆಕೋಳ, ಮಾಕನಡಕ, ಗುಂಡುಮುಣುಗು, ಕುರಿಹಟ್ಟಿ ಗ್ರಾಮಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರು ಆತಂಕದಲ್ಲಿ ದಿನ ದೂಡುವ ಸ್ಥಿತಿ ನಿರ್ಮಾಣವಾಗಿದೆ. ಗುಡೇಕೋಟೆ ಕರಡಿ ಧಾಮ ಪಕ್ಕದಲ್ಲೇ ಇರುವುದರಿಂದ ಕರಡಿಗಳು ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿವೆ.
ಗಿಡ, ಪೊದೆಗಳಲ್ಲಿ ಎಲ್ಲೆಂದರಲ್ಲಿ ಕರಡಿಗಳು ಪ್ರತ್ಯಕ್ಷವಾಗುತ್ತಿರುವುದರಿಂದ ರೈತರು ಹೊಲ ಗದ್ದೆಗಳಿಗೆ ಹೋಗಲು ಹೆದರುವಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳ ರಕ್ಷಣೆಗೆ ರೈತರು ಹರಸಾಹಸ ಪಡುತ್ತಿದ್ದಾರೆ. ಕರಡಿಗಳು ಕಂಡ್ರೆ ಸಾಕು, ಸಿಳ್ಳೆ, ಕೇಕೆ ಹಾಕಿ ಓಡಿಸಬೇಕಾಗಿದೆ.
ಜೀವದ ಹಂಗು ತೊರೆದು ಕರಡಿಗಳನ್ನು ಓಡಿಸಿ, ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳುವ ಪರಿಸ್ಥಿತಿ ಇದೀಗ ರೈತರಿಗೆ ಎದುರಾಗಿದೆ. ಅರಣ್ಯ ಇಲಾಖೆಯವರು ಕರಡಿಗಳನ್ನು ಹಿಡಿದು ರೈತರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಎಂಬುದು ರೈತರ ಮನವಿಯಾಗಿದೆ.
ಇದನ್ನೂ ಓದಿ: ಭಕ್ತಿಯ ಪರಾಕಾಷ್ಠೆ: ಬೆನ್ನಿಗೆ ಕಬ್ಬಿಣದ ಕೊಕ್ಕೆ ಹಾಕಿಕೊಂಡು ಹರಕೆ ತೀರಿಸಿದ ಭಕ್ತರು