ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಮಳೆ ಆರಂಭವಾದ್ರೂ ತುಂಗಭದ್ರಾ ಜಲಾಶಯದ ವ್ಯಾಪ್ತಿಗೊಳಪಡುವ ಉಪ ಕಾಲುವೆಗಳ ಜೀರ್ಣೋದ್ಧಾರ ಕಾರ್ಯ ಮಾತ್ರ ಮುಗಿದಿಲ್ಲ.
ಉಭಯ ಜಿಲ್ಲೆಗಳ ತುತ್ತ ತುದಿಯ ಗ್ರಾಮಗಳ ತುಂಗಭದ್ರಾ ಜಲಾಶಯದ ಉಪ ಕಾಲುವೆಗಳಿಂದ ಹಾದು ಹೋಗುವ ನೀರಿಗಾಗಿ ರೈತರು ಕಾಯುತ್ತಿದ್ದಾರೆ. ಆದರೆ, ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಒಳಹರಿವು ನಿಧಾನಗತಿಯಲ್ಲಿ ಏರತೊಡಗಿದೆ. ಉಪ ಕಾಲುವೆಗಳಲ್ಲಿ ಸಿಮೆಂಟ್ ಕಾಂಕ್ರಿಟ್ ಹಾಕೋ ಕಾರ್ಯ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ, ತುತ್ತ ತುದಿಯ ಗ್ರಾಮಗಳಿಗೆ ಜಲಾಶಯದ ನೀರು ಬರುತ್ತದೆಯೋ ಇಲ್ಲವೋ ಎಂಬ ಆತಂಕವೂ ಇದೀಗ ರೈತರಲ್ಲಿ ಶುರುವಾಗಿದೆ.
ಪ್ರತಿಬಾರಿ ಬೇಸಿಗೆ ಕಾಲದಲ್ಲಿ ಉಪ ಕಾಲುವೆಗಳ ಜೀರ್ಣೋದ್ಧಾರ ಕಾರ್ಯ ಶುರುವಾಗಲಿದ್ದು, ಅಷ್ಟೊತ್ತಿಗಾಗಲೇ ಮುಂಗಾರು ಹಂಗಾಮಿನ ಬಿತ್ತನೆಕಾರ್ಯ ಶುರುವಾಗಿರುತ್ತೆ. ಉಭಯ ಜಿಲ್ಲೆಗಳ ನಾನಾ ಗ್ರಾಮಗಳ ರೈತರಿಗೆ ಜಲಾಶಯದ ನೀರು ಸಿಗಲಾರದಂತಹ ಪರಿಸ್ಥಿತಿ ಎದುರಾಗೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ಬಾರಿ ಕೂಡ ಅಂಥದ್ದೇ ವಾತಾವರಣ ನಿರ್ಮಾಣ ಆಗಲಿದೆಯೇ ಎಂಬ ಆತಂಕವೂ ಕೂಡ ಈ ಜಿಲ್ಲೆಗಳ ರೈತರಲ್ಲಿ ಮೂಡಿದೆ.
ಕದ್ದುಮುಚ್ಚಿ ಪೈಪ್ ಹಾಕಿ ನೀರು ಕಳ್ಳತನ: ತುಂಗಭದ್ರಾ ಜಲಾಶಯದ ಉಪ- ಕಾಲುವೆಗಳ ಮೂಲಕ ಹಾದು ಹೋಗುವ ನೀರನ್ನು ರಾತ್ರಿವೇಳೆಯಲ್ಲಿ ಅಕ್ರಮವಾಗಿ ಪೈಪ್ ಹಾಕೋ ಮುಖೇನ ಕದ್ದುಮುಚ್ಚಿ ಕದಿಯುವವರ ಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ, ಈ ವೇಳೆಯಲ್ಲಿ ಉಪ ಕಾಲುವೆಗಳ ಮೂಲಕ ಹಾದು ಹೋಗುವ ನೀರು ಕೂಡ ಕಟ್ಟಕಡೆಯ ರೈತರಿಗೆ ತಲುಪದೇ ಇರೋದು ಕೂಡ ಇಲ್ಲಿ ಜೀವಂತ ನಿದರ್ಶನವಾಗಿದೆ.
ಉಪ ಕಾಲುವೆಗಳ ಕಲ್ಲು ಕಳ್ಳತನ ಆರೋಪ: ಬಳ್ಳಾರಿ ನಗರ ಹೊರವಲಯದ ಬ್ಯಾಡರ ಬೆಳಗಲ್ಲು ರಸ್ತೆಯಲ್ಲಿರುವ ಉಪ ಕಾಲುವೆಯಲ್ಲಿನ ಕಲ್ಲು ಕಳ್ಳತನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಉಪ ಕಾಲುವೆ ದಡದ ಮೇಲೆ ಬೆಳೆದು ನಿಂತ ಜಾಲಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳ ವ್ಯಾಪ್ತಿಗೆ ಬರುವ ಉಪ ಕಾಲುವೆಗಳ ದಡದ ಮೇಲೆ ಮುಳ್ಳಿನ ಕಂಟಿ ಬೆಳೆದುನಿಂತಿದೆ. ಇದರಿಂದ ಉಪ ಕಾಲುವೆಗಳ ಸೌಂದರ್ಯೀಕರಣ ಕೂಡಾ ಹಾಳಾಗಿ ಹೋಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.