ಹೊಸಪೇಟೆ: ತಮಗೆ ಸರ್ಕಾರದ ಯಾವುದೇ ಸೌಕರ್ಯಗಳು ದೊರಕುತ್ತಿಲ್ಲ ಎಂದು ತಾಲೂಕಿನ ಗೊಲ್ಲರಹಟ್ಟಿಯ ದೇವದಾಸಿಯರು ಆರೋಪಿಸಿದ್ದಾರೆ.
ಗೊಲ್ಲರಹಟ್ಟಿಯ ದೇವದಾಸಿ ಮಹಿಳೆಯರಿಗೆ ವಾಸಿಸಲು ಮನೆಗಳಿಲ್ಲ. ಕೃಷಿ ಜಮೀನಿನು ಮಂಜೂರಾತಿ ಭರವಸೆಯೂ ಈಡೇರಿಲ್ಲ. ಕೂಲಿಗೆ ಹೋಗಿ ಬದುಕಿನ ಬಂಡಿ ಸಾಗಿಸಲು ಕೂಲಿ ಕೆಲಸಗಳೂ ಸಿಗುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲೂ ಆಗುತ್ತಿಲ್ಲ ಎಂದು ಇಲ್ಲಿ ದೇವದಾಸಿ ಮಹಿಳೆಯರು ಈಟಿವಿ ಭಾರತದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ದೇವದಾಸಿ ಪುನರ್ವಸತಿ ನಿಗಮದಲ್ಲಿ ಮನೆಗಳ ನಿರ್ಮಾಣಕ್ಕೆ ಅನುದಾನ ಕೇಳಿದ್ರೆ ನಿವೇಶನ ಇಲ್ಲವೆಂದು ದೃಢೀಕರಣ ಬರೆಸಿಕೊಂಡು ಬನ್ನಿ ಎಂದು ಅಧಿಕಾರಿಗಳು ಹೇಳುತ್ತಾರೆ. ದೃಢೀಕರಣ ಬರೆದು ಕೊಡಿ ಎಂದು ಅಧಿಕಾರಿಗಳಿಗೆ ಕೇಳಿದ್ರೆ ಅವರು ಹಣಕ್ಕೆ ಬೇಡಿಕೆ ಇಡುತ್ತಾರೆ. ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿ ಎಂದರೆ, ದೇವದಾಸಿ ನಿಗಮದಲ್ಲಿ ಪಡೆದುಕೊಳ್ಳಿ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳು ಸಬೂಬು ನೀಡುತ್ತಾರೆ ಎಂದು ನೊಂದ ಮಹಿಳೆಯರು ದೂರಿದ್ದಾರೆ.
ಸರ್ಕಾರದ ಸೌಕರ್ಯಗಳಿಲ್ಲದೆ ಬದುಕು ನಡೆಸುವುದು ಕಷ್ಟವಾಗಿದೆ. ನಮ್ಮ ಅಳಲನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ದೇವದಾಸಿ ರತ್ನಮ್ಮ ಅಳಲು ತೋಡಿಕೊಂಡಿದ್ದಾರೆ.