ಬಳ್ಳಾರಿ: ಜಿಂದಾಲ್ ಕಾರ್ಖಾನೆಯ ನೌಕರರಿಗೆ ಕೊರೊನಾ ವೈರಸ್ ಹರಡುತ್ತಿರುವುದರಿಂದ ತಾತ್ಕಾಲಿಕವಾಗಿ ಸ್ಥಳಗಿತಗೊಳಿಸಬೇಕು. ಅಲ್ಲದೇ ಜಿಂದಾಲ್ ಕಾರ್ಮಿಕರಿಗೆ ರಜೆ ಸಹಿತ ವೇತನ ಮತ್ತು ರೇಷನ್ ಕಿಟ್ ನೀಡಬೇಕು ಎಂದು ಕರ್ನಾಟಕ ಜನ ಸೈನ್ಯ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿಯೇ ಅತೀ ದೊಡ್ಡ ಕಾರ್ಖಾನೆ ಜಿಂದಾಲ್ ಆಗಿದೆ. ಇವರಿಗೆ ಮಾರ್ಚ್ 23ರಂದು ಕೈಗಾರಿಕೆ ನಡೆಸುವುದು ಬೇಡ ಎಂದು ಮನವಿ ಪತ್ರ ನೀಡಿದ್ದೇವೆ. ಪ್ರತಿಯೊಬ್ಬ ಕಾರ್ಮಿಕರಿಗೆ ಕೊರೊನಾ ಪರೀಕ್ಷೆ ಮಾಡಿ ಎಂದು ಹೇಳಿದ್ದೇವೆ. ಆದ್ರೂ ನಿರ್ಲಕ್ಷ್ಯ ಮಾಡಿದ್ದು, ಇದರಿಂದಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.
ಪ್ರತಿನಿತ್ಯ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ, ಹೊಸಪೇಟೆ, ಸಂಡೂರು, ಬಳ್ಳಾರಿ ಹಾಗೂ ವಿವಿಧ ತಾಲೂಕುಗಳಿಂದ ಜಿಂದಾಲ್ ಬಸ್ ಮತ್ತು ಬೈಕ್ಗಳಲ್ಲಿ ಕಾರ್ಮಿಕರು ಅಲ್ಲಿಗೆ ಹೋಗುತ್ತಿದ್ದಾರೆ. ಇವರಿಂದ ಹಳ್ಳಿಗಳಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದರು.
ಜಿಂದಾಲ್ ಕಂಪನಿಯು ಕಾಳಜಿ ವಹಿಸದೇ ಇದ್ದಿದ್ದರಿಂದ ಕಾರ್ಖಾನೆಯ ನೌಕರರಿಗೆ ಹೆಚ್ಚಾಗಿ ಕೊರೊನಾ ವೈರಸ್ ಹರಡುತ್ತಿದೆ. ಹಾಗಾಗಿ ತಾತ್ಕಾಲಿಕವಾಗಿ ಸ್ಥಳಗಿತಗೊಳಿಸಬೇಕು ಮತ್ತು ರಜೆ ಸಹಿತ ವೇತನವನ್ನು ಸಿಬ್ಬಂದಿ, ಕಾರ್ಮಿಕರಿಗೆ ನೀಡಬೇಕು. ಅಲ್ಲದೇ ರೇಷನ್ ಕಿಟ್ ಸಹ ಜಿಂದಾಲ್ ಹಣದಿಂದಲ್ಲೇ ನೀಡಬೇಕು ಎಂದು ಒತ್ತಾಯ ಮಾಡಿದರು. ಇಲ್ಲದಿದ್ದರೆ ನಾಳೆ ಬೆಳಗ್ಗೆ ಕಂಪ್ಲಿ, ಹೊಸಪೇಟೆ, ಸಂಡೂರು, ಬಳ್ಳಾರಿ ಇನ್ನಿತರ ಸ್ಥಳಗಳಿಂದ ಬರುವ ಜಿಂದಾಲ್ ಬಸ್ಗಳನ್ನು ನಿಲ್ಲಿಸಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.