ಬಳ್ಳಾರಿ: ಆಂಧ್ರದೊಂದಿಗೆ ಸಿರುಗುಪ್ಪ ತಾಲೂಕು ಗಡಿ ಹೊಂದಿಕೊಂಡಿದ್ದು, ಈಗಾಗಲೇ ಕರ್ನೂಲ್ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಸಿರಗುಪ್ಪಗೆ ಆ ಕಡೆಯಿಂದ ಜನರು ಬರುವ ಸಾಧ್ಯತೆ ಇರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದರು.
ನಗರದ ಕೆಸ್ವಾನ್ ಸಭಾಂಗಣದಲ್ಲಿ ಸಹಾಯಕ ಆಯುಕ್ತರು, ತಹಶೀಲ್ದಾರರು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಅವರು ಸೂಚಿಸಿದರು.
ಸಿರಗುಪ್ಪ ತಾಲೂಕು ಆಡಳಿತವು ಆಂಧ್ರದಿಂದ ಜನರು ಬರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ ಅವರು, ತಾಲೂಕಿನಲ್ಲಿ ಯಾವುದೇ ರೀತಿಯ ವಿನಾಯಿತಿ ನೀಡಕೂಡದು ಎಂದರು. ಅಂತರ್ ರಾಜ್ಯಗಳ ಮೂಲಕ ಆಗಮಿಸುವ ಜಿಲ್ಲೆಯ ವಲಸಿಗರಿಗೆ ವಿವಿಧೆಡೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದ್ದು, ಈ ಕ್ವಾರಂಟೈನ್ ಕೇಂದ್ರಗಳಲ್ಲಿ ಎಲ್ಲಾ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಮತ್ತು ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಬೇಕು ಎಂದರು.
ಸಹಾಯಕ ಆಯುಕ್ತರು, ತಹಶೀಲ್ದಾರರು, ಆರೋಗ್ಯ ಇಲಾಖೆ ಅಧಿಕಾರಿಗಳು ವಿವಿಧ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.