ಬಳ್ಳಾರಿ: ಸರ್ಕಾರಿ ಶಾಲೆಗಳೆಂದ್ರೆ ಸಾಕು. ಶಿಕ್ಷಣ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಹೆಚ್ಚಿರುವ ಈ ಕಾಲಘಟ್ಟದಲ್ಲಿ ಅದೇ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ ಅನಾಥೆ ವಿದ್ಯಾರ್ಥಿನಿಯೊರ್ವಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತ್ಯತ್ತಮ ಅಂಕ ಪಡೆಯುವ ಮೂಲಕ ಇಡೀ ಶಾಲೆಗೆ ಮಾದರಿಯಾಗಿದ್ದಾಳೆ.
ಹೌದು, ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರೇ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸಲ್ಲ. ಅವರೆಲ್ಲರೂ ಕೂಡ ಖಾಸಗಿ ಶಾಲೆಗಳತ್ತ ಮೊರೆ ಹೋದ್ರೂ ಕೂಡ ಅವರ ಮಕ್ಕಳು ಇಡೀ ಶಾಲೆಗೆ ಅಲ್ಲ. ಕನಿಷ್ಠ ಅಂಕಗಳನ್ನೂ ಕೂಡ ಪಡೆಯೋಲ್ಲ. ಅಂಥಹದ್ದರಲ್ಲಿ ಈ ಅನಾಥೆ ವಿದ್ಯಾರ್ಥಿನಿ ಶ್ರೀದೇವಿ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿದ್ದುಕೊಂಡೇ 600ಕ್ಕೆ 572 (ಶೇ 92)ಅಂಕಗಳನ್ನ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಈ ಅನಾಥೆ ವಿದ್ಯಾರ್ಥಿನಿ ಶ್ರೀದೇವಿ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಳು. ಆಕೆಯೊಂದಿಗೆ ವಿದ್ಯಾರ್ಥಿನಿಯರಾದ ಜ್ಯೋತಿ ಶೇ.74.4, ಯಶೋಧ ಶೇ.64ರಷ್ಟು ಅಂಕ ಪಡೆದಿದ್ದಾರೆ.
ರೇಡಿಯೋ ಪಾರ್ಕ್ ಬಳಿಯಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿದ ಶಭಾನ ಬೇಗ ಶೇ.67.68, ಹೊಸಪೇಟೆ ಅನಂತಶಯನ ಗುಡಿ ಸರ್ಕಾರಿ ಪ್ರೌಢಶಾಲೆಯ ಶಶಿಕಲಾ ಶೇಕಡ 66.72, ಕೂಡ್ಲಿಗಿ ಎಸ್‌ಬಿಟಿಎಂ ಪ್ರೌಢಶಾಲೆಯಲ್ಲಿ ಓದಿದ ವಿಶಾಲಾಕ್ಷಿ ಶೇ.58 ಅಂಕ ಪಡೆದಿದ್ದಾರೆ.
ಶೇಕಡ 92ರಷ್ಟು ಅಂಕ ಪಡೆದಿರುವ ಶ್ರೀದೇವಿಗೆ ತಂದೆ-ತಾಯಿ ಕೂಡ ಇಲ್ಲ ಎಂಬುದು ಗಮನಾರ್ಹ. ನಾನಾ ಕಷ್ಟ-ಸಂಕೋಲೆಗಳ ನಡುವೆ ತಂದೆ-ತಾಯಿಯಿಲ್ಲದಿದ್ದರೂ ಸರ್ಕಾರಿ ಶಾಲೆಯಲ್ಲಿ ಕಲಿತು ಉತ್ತಮ ಅಂಕ ಪಡೆದಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಅನಾಥೆ ವಿದ್ಯಾರ್ಥಿನಿಯ ಜೀವನದ ಯಶೋಗಾಥೆ: ಎರಡನೇಯ ತರಗತಿಯಿದ್ದಾಗಲೇ ತಂದೆ-ತಾಯಿಯಿಂದ ದೂರವಾಗಿರುವ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ಶ್ರೀದೇವಿ 625/572 ಅಂಕ ಪಡೆಯೊ ಮುಖೇನ ಇಡೀ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಬಳ್ಳಾರಿಯ ಪಾರ್ವತಿ ನಗರದ ಸರ್ಕಾರಿ ಶಾಲೆಯಲ್ಲಿ 2-5, ಮೋಕಾದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯದಲ್ಲಿ 6-8, ಮೋಕಾದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 9-10ನೇ ತರಗತಿ ಓದಿದ್ದಾಳೆ.
ಗಾರೆ ಕೆಲಸ ಮಾಡುತ್ತಿದ್ದ ತಂದೆ ತೀರಿಕೊಂಡ ನಂತರ ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಸೇರಿದ್ದ ಶ್ರೀದೇವಿ, ಅಂದಿನಿಂದ ಇಲ್ಲೆ ಇದ್ದಾಳೆ. ಎಂಟನೇಯ ತರಗತಿ ಇದ್ದಾಗ ಆಕೆಯ ತಾಯಿ ತೀರಿ ಹೋದ ಬಳಿಕ ಎದೆಗುಂದದೆ ನಿರಂತರ ಕಲಿಕೆಯಿಂದ ಅಭ್ಯಾಸ ಪೂರೈಸಿದ್ದಾಳೆ. ಗುರುಗಳ ಮತ್ತು ಬಾಲಮಂದಿರದ ಸಿಬ್ಬಂದಿಗಳ ಸಹಾಕರದಿಂದ ಇಷ್ಟೊಂದು ಅಂಕ ಪಡೆಯಲು ಸಾಧ್ಯವಾಯಿತು, ಮುಂದೆ ಐಎಎಸ್ ಮಾಡಿ ಜಿಲ್ಲಾಧಿ ಕಾರಿಯಾಗಬೇಕೆಂಬ ಕನಸಿದೆ ಎಂದು ಶ್ರೀದೇವಿ ತಿಳಿಸಿದ್ದಾಳೆ.
ಪೋಕ್ಸೋ ಪ್ರಕರಣ ಬಾಲಕಿಗೆ ಪೊಲೀಸ್ ಹಾಗುವ ಕನಸು: ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಯೇ ಪೋಕ್ಸೋ ಪ್ರಕರಣದಡಿ ಓರ್ವ ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು. ಇಂಗ್ಲೀಷ್ ಪರೀಕ್ಷೆ ಬರೆದ ಬಳಿಕ ಸರ್ಕಾರಿ ಬಾಲ ಮಂದಿರದಲ್ಲಿದ್ದ ವಿದ್ಯಾರ್ಥಿನಿ ಪರೀಕ್ಷೆ ಬರೆಯುವುದೇ..? ಹೇಗೆಂದು ಚಿಂತಾಕ್ರಾಂತಳಾಗಿ ಅಳುತ್ತ ಕೂಳಿತಿದ್ದಳು.
ವಿದ್ಯಾರ್ಥಿನಿ ಅಳುವುದನ್ನು ಗಮನಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಯ್ಯದ್ ಚಾಂದ್ ಪಾಷಾ, ಆ ವಿದ್ಯಾರ್ಥಿನಿಯನ್ನು ಮಾತನಾಡಿಸಿದ್ದಾರೆ. ಆಗ ವಿದ್ಯಾರ್ಥಿನಿ, ನಾನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ, ಇಂದು ಗಣಿತ ಪರೀಕ್ಷೆ ಇದೆ ಎಂದಾಗ ಕೂಡಲೇ ವಾಹನ ಏರ್ಪಾಡು ಮಾಡಿಸಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದ ಪರಿಣಾಮ ಆ ವಿದ್ಯಾರ್ಥಿನಿ ಉತ್ತಮ ಫಲಿತಾಂಶ ಪಡೆದಿದ್ದು, ಮುಂದೆ ಪೊಲೀಸ್ ಆಗಬೇಕೆಂಬ ಗುರಿ ಹೊಂದಿದ್ದಾಳೆ.
ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿರುವ ಆರು ಮಂದಿ ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದಿ ರೋದಕ್ಕೆ ನನಗಂತೂ ಬಹಳ ಸಂತಸವಾಗಿದೆ. ನಮ್ಮ ಮಕ್ಕಳಿಗಿಂತಲೂ ಅವರನ್ನ ಹೆಚ್ಚಾಗಿ ಜೋಪಾನ ಮಾಡುತ್ತಿದ್ದೇವೆ. ಅವರು, ಜೀವನದಲ್ಲಿ ಮಹತ್ತರ ಸಾಧನೆ ಮಾಡಿ, ದೇಶಕ್ಕೆ ಕೀರ್ತಿ ತಂದರೇ ಅದಕ್ಕಿಂತ ಖುಷಿ ಬೇರೆ ಏನಿಲ್ಲ ಎಂದು ಬಾಲಮಂದಿರದ ಅಧೀಕ್ಷಕಿ ಚನ್ನಮ್ಮ ಸಿ.ಬಿನ್ನಾಳ ತಿಳಿಸಿದ್ದಾರೆ.