ಹೊಸಪೇಟೆ : ಇಂದು ಹೊಸಪೇಟೆ ಕೋರ್ಟ್ ಆವರಣದಲ್ಲೇ ಮಚ್ಚಿನಿಂದ ಕೊಚ್ಚಿ ಕಾಂಗ್ರೆಸ್ ಮುಖಂಡರೂ ಆಗಿದ್ದ ವಕೀಲರೊಬ್ಬರ ಬರ್ಬರ ಕೊಲೆಯಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ನಗರದ ಕೋರ್ಟ್ ಆವರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ 11.40ರ ವೇಳೆ ಕೋರ್ಟ್ ಆವರಣದಲ್ಲಿ ಮಚ್ಚಿನಿಂದ ವಕೀಲರೊಬ್ಬರ ಕೊಲೆ ಮಾಡಲಾಗಿದೆ. ನಗರದ ಮ್ಯಾಸಕೇರಿ ನಿವಾಸಿ ಹಾಗೂ ವಕೀಲರಾದ ತಾರಿಹಳ್ಳಿ ವೆಂಕಟೇಶ್ ಕೊಲೆಯಾದವರು.
23 ವರ್ಷದ ಸಹೋದರ ಸಂಬಂಧಿಯಾದ ತಾರಿಹಳ್ಳಿ ಮನೋಜ್ ಕೊಲೆ ಮಾಡಿದ ಯುವಕ ಎಂದು ತಿಳಿಸಿದರು. ಯುವಕನ ಪ್ರಾಥಮಿಕ ವಿಚಾರಣೆಯಲ್ಲಿ ಆಸ್ತಿ ವಿಚಾರ ಹಾಗೂ ಕೆಲಸ ಬಿಡಿಸಿದ್ದರ ಕೋಪವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಮನೋಜ್ನನ್ನು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಕೋಪ ಯಾಕೆ ಬಂತು ಎಂಬುದು ವಿಚಾರಣೆಯಿಂದ ತಿಳಿಯಬೇಕಾಗಿದೆ. ಮನೋಜ್ ಗೋಣಿ ಚೀಲದಲ್ಲಿ ಮಚ್ಚನ್ನು ತೆಗೆದುಕೊಂಡು ಬಂದಿದ್ದಾನೆ. ನಾಲ್ಕನೇ ಶನಿವಾರ ಆಗಿದ್ದರಿಂದ ಇಂದು ಕೋರ್ಟ್ನಲ್ಲಿ ಕಡಿಮೆ ಪೊಲೀಸರಿದ್ದರು.
ಮಚ್ಚಿನಿಂದ ಕೊಲೆ ಮಾಡುವಾಗ ವಕೀಲರು ಓಡಿ ಹೋಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿಸಿ ಕ್ಯಾಮೆರಾ ಪರಿಶೀಲಸಬೇಕಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಆನಂದ ಸಿಂಗ್ ಸಾಂತ್ವನ : ನಗರದ ನೂರರ ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಕೊಲೆಯಾದ ತಾರಿಹಳ್ಳಿ ವೆಂಕಟೇಶ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕೋರ್ಟ್ ಆವರಣದಿಂದ ತಾರಿಹಳ್ಳಿ ವೆಂಕಟೇಶ ಅವರ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ತರಲಾಯಿತು. ಬಳಿಕ ಆಸ್ಪತ್ರೆಗೆ ಬಂದ ಸಚಿವ ಆನಂದ ಸಿಂಗ್ ಅವರ ಮುಂದೆ ತಾರಿಹಳ್ಳಿ ವೆಂಕಟೇಶರ ಸಹೋದರ ಕಣ್ಣೀರು ಹಾಕಿದರು. ಬಳಿಕ ಸಚಿವ ಆನಂದ ಸಿಂಗ್ ಸಾಂತ್ವನ ಹೇಳಿದರು.
ಓದಿ: ಹೊಸಪೇಟೆ ಕೋರ್ಟ್ ಆವರಣದಲ್ಲೇ ಹರಿಯಿತು ನೆತ್ತರು: ವಕೀಲನ ಬರ್ಬರ ಹತ್ಯೆ
ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ತಾರಿಹಳ್ಳಿ ವೆಂಕಟೇಶ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.