ಬಳ್ಳಾರಿ: ಸತತ ಎರಡೂವರೆ ದಶಕದಿಂದಲೂ ವಕೀಲ ವೃತ್ತಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಗಣಿನಾಡಿನ ಹಿರಿಯ ವಕೀಲರೊಬ್ಬರು ವಿಶೇಷ ರೀತಿಯಲ್ಲಿ ಕನ್ನಡ ಭಾಷಾಭಿಮಾನ ವ್ಯಕ್ತಪಡಿಸುತ್ತದ್ದಾರೆ.
ಕರ್ನಾಟಕ ನ್ಯಾಯಾಲಯದ ವ್ಯವಸ್ಥೆಯಲ್ಲಿ ಆಡಳಿತ ಭಾಷೆ ಕನ್ನಡ ಭಾಷೆಯಾಗಿ ಸಮರ್ಪಕವಾಗಿ ಜಾರಿಯಾಗಿದೆಯೋ ಇಲ್ಲವೋ ತಿಳಿಯದು. ಆದರೆ, ಗಣಿನಗರಿಯ ಈ ಹಿರಿಯ ವಕೀಲರೊಬ್ಬರ ಕಾರ್ಯದಲ್ಲಿ ಮಾತ್ರ ಕನ್ನಡ ಭಾಷೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿದೆ.
ಯಾಕಂದ್ರೆ ಈ ಹಿರಿಯ ವಕೀಲರು ತಮ್ಮ ಎಲ್ಲಾ ಕಾನೂನಾತ್ಮಕ ಹೋರಾಟ ಹಾಗೂ ವಾದ - ಪ್ರತಿವಾದವನ್ನು ಕನ್ನಡದಲ್ಲೇ ಮಾಡುತ್ತಾರೆ. ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಅಲ್ಲಿಯ ತಮಿಳು - ಮರಾಠಿ ಭಾಷೆಗಳೇ ಆಡಳಿತ ಭಾಷೆಯನ್ನಾಗಿಸಿಕೊಂಡು ಸಮರ್ಪಕವಾಗಿ ಜಾರಿಗೆ ತಂದಿರೋದೇ ನನಗೆ ಪ್ರೇರಣೆಯಾಯಿತು ಎನ್ನುತ್ತಾರೆ ಹಿರಿಯ ವಕೀಲ ಮಂಜುನಾಥ ಹೆಗಡೆ.
ಮೂಲತಃ ಕಾರವಾರ ಜಿಲ್ಲೆಯ ಶಿರಸಿ - ಸಿದ್ಧಾಪುರ ತಾಲೂಕಿನ ಉಕ್ಕಲಮಕ್ಕಿ ಗ್ರಾಮದ ನಿವಾಸಿ ಕಮಲಾಕರ ಹೆಗಡೆ - ಸುಮಿತ್ರಾ ಹೆಗಡೆ ದಂಪತಿಗೆ ಜನಿಸಿದ ಮಂಜುನಾಥ ಹೆಗಡೆ, 1990 ಇಸವಿಯಲ್ಲಿ ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಮುಗಿಸಿದ್ದು, ಇವರು ಅಲ್ಲಿಂದ ನೇರವಾಗಿ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಹೈಕೋರ್ಟ್ಗೆ ತೆರಳಿದ್ದರು.
ಅಲ್ಲಿ ಆಡಳಿತ ಭಾಷೆಯಾಗಿ ಆಯಾ ಪ್ರಾಂತೀಯ ಭಾಷೆಯಲ್ಲೇ ಕಾನೂನಾತ್ಮಕ ಹೋರಾಟ, ವಾದ- ಪ್ರತಿವಾದ ನಡೆಯುತ್ತಿದ್ದವು. ಆದ್ರೆ, ನಮ್ಮ ಕರ್ನಾಟಕದಲ್ಲಿ ಏತಕ್ಕೆ ಆಡಳಿತ ಭಾಷೆಯಾಗಿ ಕನ್ನಡ ಭಾಷೆಯನ್ನ ಅನುಷ್ಠಾನಗೊಳಿಸಲು ಆಗುತ್ತಿಲ್ಲ ಎಂಬ ಜಿಜ್ಞಾಸೆಗೆ ಒಳಗಾಗಿದ್ದ ನಾನು, ನನ್ನಷ್ಟಕ್ಕೇ ನಾನೇ ಕನ್ನಡ ಭಾಷೆಯಲ್ಲಿ ವಾದ - ಪ್ರತಿವಾದ ಮಾಡಲಾರಂಭಿಸಿದೆ. ಆಗ ನನಗೆ ನನ್ನ ಕಕ್ಷಿದಾರರ ಬೆಂಬಲ ಕೂಡ ಸಕಾರಾತ್ಮಕವಾಗಿ ಬಂತು. ಹೀಗಾಗಿ, ನಾನು ನೂರಾರು ದಾವೆಗಳಿಗೆ ಕನ್ನಡ ಭಾಷೆಯಲ್ಲೇ ವಾದ - ಪ್ರತಿವಾದ ಮಂಡಿಸಲು ಶುರು ಮಾಡಿದೆ. ಇದರಿಂದ ಕಕ್ಷಿದಾರರಿಗೂ ಕೂಡ ಸುಲಲಿತವಾಗಿ ಪ್ರಕರಣದ ಹಾದಿಯನ್ನ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ರು.
ಆಂಗ್ಲ ಭಾಷೆಯ ವ್ಯಾಮೋಹ ಕೈಬಿಡಿ:
ಇಡೀ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಇರುತ್ತೆ ಎಂಬ ಕಪೋಲಕಲ್ಪಿತ ಭಾವನೆಗಳನ್ನ ಕಕ್ಷಿದಾರರಾಗಲೀ ಅಥವಾ ಯುವ ವಕೀಲರಾಗಲೀ ಹೊಂದಿದ್ದರೆ ಅದನ್ನ ಮೊದಲು ತೆಗೆದು ಹಾಕಿಬಿಡಿ. ಕನ್ನಡ ಭಾಷೆಯಲ್ಲೂ ವಾದ - ಪ್ರತಿವಾದ ಮಂಡಿಸಿದ್ರೂ ಕೂಡ ನ್ಯಾಯಾಂಗ ವ್ಯವಸ್ಥೆಯು ಅದನ್ನ ಸ್ವೀಕರಿಸಲಿದೆ. ಎಲ್ಲಾ ಯುವ ವಕೀಲರು ಇದನ್ನರಿತುಕೊಂಡು ಕನ್ನಡ ಭಾಷೆಯಲ್ಲಿ ವಾದ - ಪ್ರತಿವಾದ ಮಂಡಿಸುವಂತಹ ಧೈರ್ಯವನ್ನ ಮಾಡಬೇಕು ಎಂದು ಹಿರಿಯ ವಕೀಲ ಮಂಜುನಾಥ ಹೆಗಡೆ ಹೆಳಿದರು.