ಬಳ್ಳಾರಿ: ವಿವಿಧ ಸರ್ಕಾರಿ ಇಲಾಖೆ ಕಚೇರಿಗಳಿಗೆ ಭೇಟಿಕೊಡುವ ಬಡ ಮತ್ತು ಕೂಲಿ ಕಾರ್ಮಿಕರ ಕಷ್ಟ, ಕಾರ್ಪಣ್ಯಗಳಿಗೆ ಸಕಾಲದಲ್ಲಿ ಸ್ಪಂದಿಸಿ ಗಾಂಧಿ ಮಾರ್ಗದಲ್ಲಿಯೇ ಮುನ್ನಡೆಯೋಣ ಎಂದು ಎಸಿ ರಮೇಶ ಕೋನರೆಡ್ಡಿ ನೌಕರರಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿಯವರ 150ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗಾಂಧೀಜಿಯವರು ಶೋಷಿತರ ಧ್ವನಿಯಾಗಿದ್ದಾರೆ. ಅದರಂತೆಯೇ ನಾವೆಲ್ಲರೂ ಮುನ್ನಡೆಯಬೇಕು. ಸರ್ಕಾರಿ ಕಚೇರಿಗಳಿಗೆ ಪ್ರತಿದಿನ ಭೇಟಿಕೊಡುವ ಬಡ-ಕೂಲಿಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಅಲೆದಾಡಿಸಬಾರದು. ಅದರಿಂದ ನಮಗೇನು ಪ್ರಯೋಜನವಾಗಲ್ಲ ಎಂದರು.
ಹಿಂಸೆ-ಸೇಡಿನ ಮಾರ್ಗಗಳಿಗಿಂತ ಅಹಿಂಸಾ ಮಾರ್ಗ ಅತ್ಯಂತ ಪರಿಣಾಮಕಾರಿ ಎಂದು ವಿಶ್ವಕ್ಕೆ ಸಾರಿದವರು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಕೊಡುಗೆ ದೊಡ್ಡದು.0 ಅವರು ನಡೆಸಿದ ಅಹಿಂಸಾ ಚಳವಳಿ ಮಾರ್ಗಗಳು ಇಂದಿಗೂ ಪ್ರಸ್ತುತ ಎಂದರು.
ಹಳ್ಳಿಗಳೇ ಈ ದೇಶದ ಜೀವಾಳವೆಂದಿದ್ದ ಗಾಂಧೀಜಿಯವರು ಹಳ್ಳಿಗಳು ಮೊದಲು ಅಭಿವೃದ್ಧಿಯಾಗಬೇಕೆಂದು ಕನಸು ಕಂಡಿದ್ದರು. ಅಭಿವೃದ್ಧಿ ಎಂದರೆ ಕೇವಲ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲ. ಅಲ್ಲಿನ ಶೈಕ್ಷಣಿಕ, ಆರೋಗ್ಯ ಮತ್ತು ಅರ್ಥಿಕವಾಗಿ ಜನರ ಜೀವನಮಟ್ಟ ಸುಧಾರಣೆಯಾದಾಗ ಮಾತ್ರ ಹಳ್ಳಿ ಅಭಿವೃದ್ಧಿಯಾದಂತೆ ಎಂದಿದ್ದರು ಗಾಂಧೀಜಿ ಎಂದರು.
ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳು ಹಾಗೂ ತತ್ವಾದರ್ಶಗಳ ಕುರಿತ ಕಿರುಹೊತ್ತಿಗೆಗಳನ್ನು ಇದೇವೇಳೆ ಬಿಡುಗಡೆ ಮಾಡಲಾಯಿತು. ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಮಹಾತ್ಮ ಗಾಂಧೀಜಿಯ 150 ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ತಹಶೀಲ್ದಾರ ವಿಶ್ವಜೀತ್ ಮೆಹತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬಿ ಕೆ ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶಬಾಬು, ಸಹಕಾರ ಸಂಘಗಳ ಉಪನಿಬಂಧಕಿ ಡಾ.ಸುನೀತಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಶುಭಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೀಶ ಶಿವಾಚಾರ್ಯ, ಅಬಕಾರಿ ಇಲಾಖೆಯ ವಿನೋದ ಡಾಂಗೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ, ಡಿಸಿ ಕಚೇರಿಯ ಆಪ್ತ ಸಹಾಯಕ ಮಂಜುನಾಥಗೌಡ ಇದ್ದರು.