ಬಳ್ಳಾರಿ: ಕತ್ತಿ, ಗುರಾಣಿ, ಪಿಸ್ತೂಲ್ ಹಾಗೂ ಜಾತಿಯ ಜಾಡು ಹಿಡಿದುಕೊಂಡು ರಾಜಕಾರಣಿಗಳು ಮ್ಯೂಜಿಕಲ್ ಚೇರ್ನ ಆಟ ಆಡುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಮ್ಯೂಜಿಕಲ್ ಚೇರ್ನ ಆಟಕ್ಕೆ ಹೊಸ ರೂಪ ಕೊಟ್ಟವರು ಈ ರಾಜಕಾರಣಿಗಳು. ಕತ್ತಿ, ಗುರಾಣಿ, ಪಿಸ್ತೂಲ್ ಹಾಗೂ ಜಾತಿ ಹೆಸರಿನಲ್ಲಿ ತಾವು ಬಲಿಷ್ಠರಾಗಿ ಮ್ಯೂಜಿಕಲ್ ಚೇರ್ನ ಆಟ ಆಡುತ್ತಿದ್ದಾರೆ.
ಸಾಮಾನ್ಯ ವ್ಯಕ್ತಿ ರಾಜಕಾರಣಕ್ಕೆ ಬಂದ್ರೆ ಕೊನೆಯವರೆಗೂ ಸುತ್ತುತ್ತಾ ಇರಬೇಕಾದ ಪರಿಸ್ಥಿತಿ ಇದೆ. ಇಂತಹ ಸಂಸ್ಕೃತಿ ಮೊದಲು ಹೋಗಬೇಕು. ಒಳ್ಳೆಯವರು ಈ ರಾಜಕಾರಣದತ್ತ ಸುಳಿಯದೇ ಹೋದ್ರೆ ವಂಶ ಪಾರಂಪರಿಕ ಹಾಗೂ ರಾಜಕಾರಣದಲ್ಲೇ ಬಲಿಷ್ಠರಾಗಿರುವ ಕೈಯಲ್ಲಿ ಈ ರಾಜಕಾರಣ ಉಳಿದುಕೊಂಡು ಬಿಡುತ್ತೆ. ಅವರಿಂದ ಏನನ್ನೂ ಕೂಡ ನಾವು ನಿರೀಕ್ಷೆ ಮಾಡಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡುವ ಮುಖೇನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೂಟಿ ಹೊಡೆಯುತ್ತಿದೆ. 22 ಸಾವಿರ ಕೋಟಿ ರೂ.ಗಳಷ್ಟು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಅಷ್ಟೊಂದು ಬಜೆಟ್ನ ಹಣ ಉಳಿತಾಯ ಆಗಿದೆಯಾದರೂ, ತೈಲಬೆಲೆ ಏರಿಕೆ ಮಾಡುವ ಮುಖೇನ ಇಡೀ ದೇಶವನ್ನೇ ಲೂಟಿ ಹೊಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಾಗಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ದೂರಿದ್ದಾರೆ.