ಬಳ್ಳಾರಿ: ಬಿರುಬಿಸಿಲನ್ನೂ ಲೆಕ್ಕಿಸದೆ ಕಳೆದ ಎರಡು ತಿಂಗಳ ಕಾಲ ಲೋಕಸಭಾ ಸಾರ್ವತ್ರಿಕ ಚುನಾವಣಾ ನಿಮಿತ್ತ ಜಿಲ್ಲೆಯಾದ್ಯಂತ ಪ್ರಚಾರ ಕೈಗೊಂಡ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ರಿಲಾಕ್ಸ್ ಮೂಡ್ನಲ್ಲಿದ್ದಾರೆ.
ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಿಗ್ಗೆ ದಿನಪತ್ರಿಕೆಗಳನ್ನು ಓದುತ್ತಾ ಕುಳಿತಿದ್ದರು. ಅವರೊಂದಿಗೆ ಪತ್ನಿ, ಪುತ್ರ, ಸೊಸೆ ಹಾಗೂ ಕಾರ್ಯಕರ್ತರು, ಮುಖಂಡರೊಂದಿಗೆ ಕೆಲ ಕಾಲ ಸಮಯ ಕಳೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ಜಿಲ್ಲೆಯಾದ್ಯಂತ ಕಾಂಗ್ರೆಸ್ ಪರ ಅಲೆಯಿದೆ. ಕಳೆದ ಉಪ ಚುನಾವಣೆಯಲ್ಲಿ ಬಿಡುವು ಇಲ್ಲದೇ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವೆ. ಮೊನ್ನೆಯ ದಿನವೂ ಕೂಡ ಲೋಕಸಭಾ ಚುನಾವಣಾ ನಿಮಿತ್ತ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಾಗ ಜಿಲ್ಲೆಯ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಕಳೆದ ಉಪ ಚುನಾವಣೆಯಲ್ಲಿ ನನ್ನನ್ನ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿ, ಪಾರ್ಲಿಮೆಂಟ್ಗೆ ಕಳಿಸಿದ್ದಾರೆ. ಈಗ ಕೂಡ ಮತದಾರರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ಪಕ್ಷ ಬಿಡದಂತೆ ಸಲಹೆ:
ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ನಾನೂ ಕೂಡ ಭೇಟಿಯಾಗಿರುವೆ. ಪಕ್ಷ ಬಿಡದಂತೆ ಮನವರಿಕೆ ಮಾಡಿರುವೆ. ಈ ಪಕ್ಷದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ ಎಂಬ ಸಲಹೆ ನೀಡಿರುವೆ. ಇಷ್ಟಾದರೂ ಕೂಡ ಅವರು ಪಕ್ಷ ಬಿಡುವ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರ ಇದ್ದಂತೆ. ಬರೋರು ಬರುತ್ತಾರೆ. ಹೋಗೋರು ಹೋಗುತ್ತಾರೆ. ಇಲ್ಲಿ ಯಾರು ಬಂದ್ರೂ, ಹೋದ್ರೂ ತಲೆ ಕೆಡಿಸಿಕೊಳ್ಳುವಂತಹ ಅಗತ್ಯವಿಲ್ಲ. ಯಾಕೆಂದ್ರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡದಾದ ಕಾರ್ಯಕರ್ತರ ಪಡೆಯಿದೆ. ಯಾವುದೇ ಪಕ್ಷದ ನಾಯಕರು ಬಂದರೂ ಕಾರ್ಯಕರ್ತರ ಪಡೆ ಮಾತ್ರ ಅಲುಗಾಡೋದಿಲ್ಲ ಎಂದರು.
ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟು ಹೋದ್ರೂ, ಪಕ್ಷಕ್ಕೇನು ನಷ್ಟವಿಲ್ಲ. ನಾನೂ ಕೂಡ ಅನೇಕ ಬಾರಿ ಮನವರಿಕೆ ಮಾಡಿದ್ದೇನೆ. ಈಗ ಮತ್ತೊಮ್ಮೆ ಮನವರಿಕೆ ಮಾಡಲು ಪ್ರಯತ್ನಿಸುವೆ ಎಂದರು.