ಬಳ್ಳಾರಿ: ಎಸ್ಸಿ- ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸದೇ ಕೇಂದ್ರ ಮತ್ತು ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರಗಳು ನಮಗೆ ಮೋಸ ಮಾಡುತ್ತಿವೆ. ಈ ಮೋಸದ ವಿರುದ್ಧ ನಾವು ಇಂದು ಹೋರಾಡುತ್ತಿದ್ದೇವೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹೇಳಿದರು.
ನ್ಯಾ. ನಾಗಮೋಹನದಾಸ್ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಕರೆ ನೀಡಿದ್ದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನ್ಯಾ. ನಾಗಮೋಹನದಾಸ್ ವರದಿ ನೀಡಿ ಎರಡು ವರ್ಷ ಆಗಿದೆ. ಆದರೆ, ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಸರ್ಕಾರಗಳ ಈ ಮೋಸದ ವಿರುದ್ಧ ನಾವು ಇಂದು ಹೋರಾಟಕ್ಕಿಳಿದಿದ್ದೇವೆ ಎಂದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದ್ದ ಶಾಸಕರಾದ ಬಿ. ನಾಗೇಂದ್ರ, ಕಂಪ್ಲಿ ಶಾಸಕ ಜೆ. ಎಂ ಗಣೇಶ್, ವಿ. ಎಸ್ ಶಿವಶಂಕರ್, ಎ. ಮಾನಯ್ಯ, ಮುಂಡರಗಿ ನಾಗರಾಜ್ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಿ ತದನಂತರ ಬಿಡುಗಡೆಗೊಳಿಸಲಾಯಿತು. ಬಳ್ಳಾರಿ ನಗರದ ಕಾಗೆ ಪಾರ್ಕ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸಮಾವೇಶಗೊಂಡಿದ್ದರು.
ಎಸ್ ಸಿ ಮತ್ತು ಎಸ್ ಟಿಗಳ ಮೀಸಲು ವಿಷಯದಲ್ಲಿ ಸರ್ಕಾರಗಳು ಮೀನಮೇಷ ಎಣಿಸುತ್ತಿದ್ದಾರೆ. ಮೀಸಲಾತಿ ಹೆಚ್ಚಳ ಮಾಡದಿದ್ದರೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯ ಜಿಲ್ಲಾಧಿಕಾರಿ ಕಚೇರಿ ತಲುಪುವ ಮುನ್ನ ತಹಶೀಲ್ದಾರ್ ಕಚೇರಿ ಬಳಿ ಶಾಸಕರು ಹಾಗೂ ನಾಯಕರನ್ನು ಬಂಧಿಸಲಾಯಿತು.
ಇದಕ್ಕೂ ಮುನ್ನ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಲಾಯಿತು. ನಂತರದಲ್ಲಿ ಡಿಸಿ ಕಚೆರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಅರ್ಧ ಗಂಟೆ ಕಾಲ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.
7.5 ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ..
ಚಿತ್ರದುರ್ಗ: ಮೀಸಲಾತಿಯನ್ನು ಸರ್ಕಾರ ಕೂಡಲೇ ಹೆಚ್ಚಿಸಬೇಕೆಂದು ಒತ್ತಾಯಿಸಿ ನಗರದಲ್ಲಿ SC- ST ಮೀಸಲಾತಿ ಕ್ರಿಯಾಶೀಲ ಸಮಿತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಮಧಕರಿ ನಾಯಕನ ಪ್ರತಿಮೆ ಹಾಗೂ ಅಂಬೇಡ್ಕರ್ ಪ್ರತಿಮೆ, ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಗರದ ಮಧಕರಿ ವೃತ್ತದಿಂದ ಡಿಸಿ ಕಚೇರಿಯವರೆಗೂ ಪ್ರತಿಭಟನೆ ಮಾಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಸಿದ್ದರಾಮೇಶ್ವರ ಶ್ರೀ ಶಾಸಕ ರಘುಮೂರ್ತಿ ಸೇರಿ ಹಲವರು ಭಾಗಿಯಾಗಿದ್ದರು.
ಮೈಸೂರಿನಲ್ಲಿ ಸುರಿಯುವ ಮಳೆಯಲ್ಲೂ ಬೃಹತ್ ಪ್ರತಿಭಟನೆ
ಮೀಸಲು ಹೆಚ್ಚಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ವಿವಿಧ ಸಂಘಟನೆಗಳು ಮೈಸೂರಿನಲ್ಲಿ ಸುರಿಯುವ ಮಳೆಯಲ್ಲೂ ಬೃಹತ್ ಪ್ರತಿಭಟನೆ ನಡೆಸಿದರು. ಇಂದು ಮೈಸೂರು ನಗರದ ಟೌನ್ ಹಾಲ್ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆಗಳ ಒಕ್ಕೂಟ, ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್ ನಾಗಮೋಹನ್ ಆಯೋಗವು ನೀಡಿರುವ ವರದಿಯನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು, ಸ್ವಾಮೀಜಿಗಳು ಪ್ರತಿಭಟನೆ ನಡೆಸಿದರು.
ಓದಿ: ಕಬಿನಿ ಜಲಾಶಯದಿಂದ ನೀರು ಬಿಡುಗಡೆ : 50 ಗ್ರಾಮಗಳಿಗೆ ಸಂಚಾರ ಸ್ಥಗಿತ