ಬಳ್ಳಾರಿ: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು ಜಿಲ್ಲೆಯ ಹೊಸಪೇಟೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನೂರಾರು ರೈತರು ಬೆಳಿಗ್ಗೆ 8ರಿಂದ ಪ್ರತಿಭಟನಾ ಸ್ಥಳಕ್ಕೆ ಬಂದು ಶಾಮಿಯಾನ ಹಾಕಿ ಸಿದ್ಧತೆ ನಡೆಸಿದರು. ನಂತರ ಉಪಾಹಾರವನ್ನು ರಸ್ತೆಯ ಮಧ್ಯದಲ್ಲೇ ತಯಾರಿಸಿಕೊಂಡರು. ಬಳಿಕ, ನೂರಾರು ರೈತರು ಬೈಕ್‍ಗಳನ್ನು ರಸ್ತೆಗೆ ಅಡ್ಡಗಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಕಾರ್ತಿಕ ಮಾತನಾಡಿ, ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನ ಬರೆದಂತೆ. ಸರ್ಕಾರಗಳು ರೈತರಿಗೆ ಅನಕೂಲ ಮಾಡಿಕೊಡುತ್ತಿಲ್ಲ. ಬದಲಿಗೆ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಾಹನ ಸವಾರರ ಪರದಾಟ:
ರಾಷ್ಟ್ರೀಯ ಹೆದ್ದಾರಿ ತಡೆಯೊಡ್ಡಿದ್ದರಿಂದ ಕೆಲಕಾಲ ವಾಹನ ಸವಾರರು ಪರದಾಡಬೇಕಾಯಿತು. ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಮಂಗಳೂರು, ಬಾಗಲಕೋಟೆ, ವಿಜಯಪುರ, ಪುಣೆ, ಮುಂಬೈನತ್ತ ಪ್ರಯಾಣ ಬೆಳೆಸುವ ವಾಹನಗಳು ಅತೀವ ತೊಂದರೆ ಅನುಭವಿಸಬೇಕಾಯಿತು.
ಎಸ್ಪಿ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ಬಿ.ನಿಂಬರಗಿ ಭೇಟಿ ನೀಡಿದರು. ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ನಿಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಹೀಗಾಗಿ, ಪ್ರತಿಭಟನೆಯನ್ನು ಕೈಬಿಡುವಂತೆ ಎಸ್ಪಿ ಮನವಿ ಮಾಡಿದರು. ಎಸ್ಪಿಯವರ ಮನವಿ ಮೇರೆಗೆ ರೈತರ ಸಂಘದ ಮುಖಂಡರು ಪ್ರತಿಭಟನೆ ಕೈಬಿಟ್ಟರು.