ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯಲ್ಲಿರುವ ಶಾವಿ ಆಸ್ಪತ್ರೆಯನ್ನ ಕೋವಿಡ್ ಸೋಂಕಿತರ ಕೇರ್ ಸೆಂಟರ್ ಆಗಿ ಮಾಡಲು ಭಾರತೀಯ ವೈದ್ಯಕೀಯ ಸಂಘ ನಿರ್ಧರಿಸಿದೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆಯ ಮೇರೆಗೆ ಈ ದಿನದಿಂದಲೇ ಕೋವಿಡ್ ಕೇರ್ ಸೆಂಟರ್ ಆಗಿ ಕಾರ್ಯನಿರ್ವಹಿಸಲು ಶಾವಿ ಆಸ್ಪತ್ರೆಯ ಮಾಲೀಕರು ಒಪ್ಪಿಗೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ಹಣಕಾಸಿನ ನೆರವಿನೊಂದಿಗೆ ಸಕಲ ತಯಾರಿ ನಡೆಸಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ (ಡಿಹೆಚ್ಒ) ಡಾ. ಹೆಚ್.ಎಲ್.ಜನಾರ್ದನ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳಾದ ಡಾ.ಎಸ್.ಕೆ. ಅರುಣ, ಡಾ.ಭರತ್, ಡಾ. ಅರುಣಾ ಕಾಮಿನೇನಿ ಸೇರಿದಂತೆ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.
ಶಾವಿ ಆಸ್ಪತ್ರೆಯ ಡಾ.ರಾಕೇಶ ಶಾವಿ ಅವರು ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಅಂದಾಜು ನೂರು ಬೆಡ್ಗಳಿವೆ. ಅದರೊಳಗೆ 50 ಬೆಡ್ಗಳನ್ನ ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಲಾಗಿದೆ. ಡೆಡಿಕೇಟೇಡ್ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಜಿಲ್ಲಾಡಳಿತ ಕೋರಿದೆ. ಈ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿರೋದಕ್ಕೆ ವಿರೋಧ ವ್ಯಕ್ತವಾದ್ರೆ, ನಾನೇ ಅವರ ಬಳಿ ಹೋಗಿ ಜಾಗೃತಿ ಮೂಡಿಸುತ್ತೇನೆ ಎಂದರು.