ವಿಜಯನಗರ: ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಪರಶುರಾಮ ನಾಯ್ಕ ವಿರುದ್ಧ ದೂರು ದಾಖಲಾಗಿದ್ದು, ಕೇಸ್ ದಾಖಲಾಗುತ್ತಿದ್ದಂತೆ ಠಾಣೆಯಿಂದ ಪೊಲೀಸ್ ಕಾನ್‌ಸ್ಟೇಬಲ್ ಪರಾರಿಯಾಗಿದ್ದಾರೆ.
ಆನೇಕಲ್ ತಾಂಡಾದ ಗ್ರಾಮ ಪಂಚಾಯಿತಿ ಸದಸ್ಯ ಎಲ್.ಆರ್. ಪಾಂಡುನಾಯ್ಕ ಅವರನ್ನು ಕೊಲೆ ಮಾಡಲು ರವಿನಾಯ್ಕ ಎನ್ನುವವರಿಗೆ 10 ಲಕ್ಷ ನಗದು, ಒಂದು ಮನೆ ಕಟ್ಟಿಸಿಕೊಡುವುದಾಗಿ ಆಮಿಷವೊಡ್ಡಿದ್ದರು ಎನ್ನಲಾಗ್ತಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಹೋದರ ದೇವೇಂದ್ರ ನಾಯ್ಕ್ ಹಾಗೂ ಸೊಸೈಟಿ ಚುನಾವಣೆಯಲ್ಲಿ ತಾಯಿ ಯಮುನಿಬಾಯಿ ಸೋತಿದ್ರು. ಇದರಿಂದಾಗಿ ಪರಶುರಾಮ ಪ್ರತಿಸ್ಪರ್ಧಿಯ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಕೊಲೆ ಮಾಡಲು ಭಯವಾಗಿ ಕೃತ್ಯವೆಸಗಲು ಹಿಂಜರಿದ ರವಿನಾಯ್ಕ ಸುಪಾರಿ ವಿಷಯವನ್ನು ಪಾಂಡುನಾಯ್ಕನಿಗೆ ತಿಳಿಸಿದ್ದಾನೆ. ದ್ವೇಷದಿಂದ ನನ್ನ ಕೊಲೆಗೆ ಸಂಚು ನಡೆಸಿದ್ದಾರೆಂದು ಪಟ್ಟಣದ ಪೊಲೀಸ್ ಠಾಣೆಗೆ ಈ ಕುರಿತು ಆಡಿಯೋ ದಾಖಲೆಯೊಂದಿಗೆ ಕಾನ್‌ಸ್ಟೇಬಲ್ ಪರುಶುರಾಮ್ ನಾಯ್ಕ ವಿರುದ್ಧ ದೂರು ನೀಡಲಾಗಿದೆ. ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: ಆಪತ್ಬಾಂಧವನಾಗಿ ಬೆಂಕಿ ನಂದಿಸಲು ಹೋಗಿ ಚಿನ್ನಾಭರಣ ಕದ್ದ ಆರೋಪಿ ಅರೆಸ್ಟ್