ಬಳ್ಳಾರಿ: ಮನೆ ಮಾಲೀಕನಿಗೆ 4 ಲಕ್ಷ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಂದಿರುವ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ಇಂದಿರಾ ನಗರ ನಿವಾಸಿ ಮಹೇಶ್ ಅವರು ಸಿಂಗಲ್ ಬೆಡ್ ರೂಮ್ ಮನೆ ಹೊಂದಿದ್ದಾರೆ. ಈ ತಿಂಗಳು 4,26,852 ರೂಪಾಯಿ ಬಿಲ್ ಬಂದಿದೆ. ಇದನ್ನು ಕಂಡ ಅವರು ಅರೆಕ್ಷಣ ಕಂಗಾಲಾಗಿದ್ದರು.
"ಪ್ರತಿ ತಿಂಗಳು ನಮ್ಮ ಮನೆಗೆ 1,700 ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಈ ಬಾರಿ ಇಷ್ಟೊಂದು ಪ್ರಮಾಣದ ಬಿಲ್ ಬಂದಿದೆ. ಜೆಸ್ಕಾಂ ಸಿಬ್ಬಂದಿಯನ್ನು ವಿಚಾರಿಸಿದ್ದು ಬಿಲ್ ವಾಪಸ್ ಪಡೆದಿದ್ದಾರೆ" ಎಂದು ಮಹೇಶ್ ಹೇಳಿದರು. "ಇದಕ್ಕೂ ಮುನ್ನ, ಕಚೇರಿಗೆ ತೆರಳಿ ಆನ್ಲೈನ್ನಲ್ಲಿ ನಿಮ್ಮ ಮನೆಯ ರೀಡರ್ ಸಂಖ್ಯೆ ಆಧರಿಸಿ ಬಿಲ್ ಪಾವತಿಸಿ ಎಂದು ಸೂಚಿಸಿದ್ದರು. ಅದರಂತೆ ಆನ್ಲೈನ್ ಮೂಲಕ ಪರೀಕ್ಷಿಸಿದರೆ 4 ಲಕ್ಷ ರೂ ಬಿಲ್ ತೋರಿಸಿದೆ. ದೂರು ನೀಡಿದ ಬಳಿಕ ಮತ್ತೆ ಮನೆಗೆ ಬಂದ ಜೆಸ್ಕಾಂ ಸಿಬ್ಬಂದಿ ಮರುಪರಿಶೀಲಿಸಿ ತಾಂತ್ರಿಕ ದೋಷದಿಂದ ಬಿಲ್ ತಪ್ಪಾಗಿ ಬಂದಿದೆ. ನೀವು 885 ರೂ. ಪಾವತಿಸುವಂತೆ ಹೊಸ ಬಿಲ್ ನೀಡಿದ್ದಾರೆ" ಎಂದು ಅವರು ತಿಳಿಸಿದರು.
ಮನೆ ಯಜಮಾನಿ ವೀರಮ್ಮ ಮಾತನಾಡಿ, "ನಮ್ಮ ಮನೆಯಲ್ಲಿ ಒಂದು ರೆಫ್ರಿಜರೇಟರ್ ಮತ್ತೆ ಮೂರು ಫ್ಯಾನ್‌ಗಳಿವೆ. ವಾತಾವರಣ ತಂಪಿದ್ದಾಗ ಇವುಗಳ ಬಳಕೆ ತುಂಬಾ ಕಮ್ಮಿ. ಪ್ರತಿ ತಿಂಗಳು 700 ರೂ ನಿಂದ ಹಿಡಿದು 1,000 ರವರೆಗೆ ಕರೆಂಟ್ ಬಿಲ್ ಬರುತ್ತಿತ್ತು. ಈ ಬಾರಿಯೇ ಇಷ್ಟು ಮೊತ್ತದ ಬಿಲ್ ಬಂದಿದೆ. ವಿದ್ಯುತ್ ಬಿಲ್ ನೀಡುವಾತ ಬಿಲ್ ನೋಡಿ ಏನೋ ತಪ್ಪಾಗಿದೆ ಎಂದು ವಾಪಸ್ ಹೋಗಿದ್ದರು. ಆದರೆ ರಾತ್ರಿ ನಮಗೆ ಬಿಲ್ ಕುರಿತು ಮೆಸೇಜ್ ಬಂದಿದೆ. ನಾವು ಈ ತಿಂಗಳು ಮಳೆಯಿಂದ ವಾತಾವರಣ ತಂಪಿದ್ದ ಕಾರಣ ಫ್ಯಾನ್, ಫ್ರಿಡ್ಜ್ ಬಳಕೆ ಕಡಿಮೆ ಮಾಡಿದ್ದೆವು. ವಾಷಿಂಗ್ ಮಿಷನ್ ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡುತ್ತೇವೆ" ಎಂದರು.
ತಗಡಿನ ಶೆಡ್ ಮನೆಗೆ ಬಂದಿತ್ತು ₹1 ಲಕ್ಷ ಕರೆಂಟ್ ಬಿಲ್!: ಕೊಪ್ಪಳ ಜಿಲ್ಲೆಯಲ್ಲಿ ತಗಡಿನ ಶೆಡ್ನಲ್ಲಿ ವಾಸಿಸುವ ಗಿರಿಜಮ್ಮ ಎಂಬ ವೃದ್ಧೆಗೆ ಜೂನ್ ತಿಂಗಳಲ್ಲಿ ₹1 ಲಕ್ಷಕ್ಕೂ ಅಧಿಕ ಕರೆಂಟ್ ಬಿಲ್ ಬಂದಿತ್ತು. ಇವರ ಮನೆಯಲ್ಲಿ ಪ್ರತಿದಿನ ಉರಿಯುವುದು ಎರಡೇ ಎರಡು ಬಲ್ಬ್. ಆದರೂ ಅವರಿಗೆ ಇಷ್ಟು ಬಿಲ್ ಬಂದಿದ್ದಕ್ಕೆ ಅಜ್ಜಿ ಕಣ್ಣೀರು ಹಾಕಿದ್ದರು. ಇವರ ಮನೆಗೆ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. 70 ರಿಂದ 80 ರೂ.ನಂತೆ ಪ್ರತಿ ತಿಂಗಳು ಇವರಿಗೆ ವಿದ್ಯುತ್ ಬಿಲ್ ಬರುತ್ತಿತ್ತು. ಜೆಸ್ಕಾಂ ಸಿಬ್ಬಂದಿ ಹೊಸ ಮೀಟರ್ ಅಳವಡಿಸಿದ ನಂತರ ಲಕ್ಷ ರೂ ಮಟ್ಟದಲ್ಲಿ ಬಿಲ್ ಬಂದಿದೆ. ಹೆಚ್ಚು ಬಿಲ್ ಬಂದಿರುವ ವಿಷಯ ತಿಳಿದ ಕೊಪ್ಪಳ ಎಕ್ಸಿಕ್ಯುಟಿವ್ ಇಂಜಿನಿಯರ್ ರಾಜೇಶ್, ಗಿರಿಜಮ್ಮನ ಮನೆಗೆ ಬಂದು, ಬಿಲ್ ಪರಿಷ್ಕರಣೆ ಮಾಡುತ್ತೇವೆ, ಲಕ್ಷ ಬಿಲ್ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಹೇಳಿ ಧೈರ್ಯ ಹೇಳಿ ಸಮಸ್ಯೆ ಬಗೆಹರಿಸಿದ್ದರು.
ಇದನ್ನೂ ಓದಿ: ತಗಡಿನ ಶೆಡ್, ಉರಿಯೋದು ಎರಡೇ ಬಲ್ಬ್... ಬರೋಬ್ಬರಿ 1,03,315 ರೂ ಬಿಲ್ ನೀಡಿದ ಜೆಸ್ಕಾಂ.. ಬಿಲ್ ನೋಡಿ ಶಾಕ್ ಆದ ವೃದ್ಧೆ!