ಬಳ್ಳಾರಿ: ಜಿಲ್ಲೆಯ ಕುರುಗೋಡು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳು ಪ್ರಧಾನಿ ನರೇಂದ್ರ ಮೋದಿ ಜೊತೆ 'ಪರೀಕ್ಷಾ ಪೇ ಚರ್ಚಾ' ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾಳೆ.
ಕುರುಗೋಡು ತಾಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಕೆ ಎಂ ಪಂಪಯ್ಯಸ್ವಾಮಿ ಹಾಗೂ ಕೆ.ನೀಲಮ್ಮನವರ ಪುತ್ರಿ, ಕುರುಗೋಡು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ ಎಂ ನೇತ್ರಾವತಿ ಪ್ರಧಾನಿಯೊಂದಿಗಿನ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.
ಈ ಬಗ್ಗೆ ಶಿಕ್ಷಕ ಶಾಸ್ತ್ರಿ ಕೃಷ್ಣಮೂರ್ತಿ ಮಾತನಾಡಿ, ಪರೀಕ್ಷಾ ಪೇ ಚರ್ಚಾ -2020 ಪ್ರಧಾನಿಯೊಂದಿಗಿನ ಸಂವಾದಕ್ಕೆ ಡಿಸೆಂಬರ್ ತಿಂಗಳಲ್ಲಿ ಆನ್ಲೈನ್ ಮೂಲಕ ಆಯ್ದ ವಿಷಯಗಳ ಕುರಿತ ಪ್ರಬಂಧ ಮಂಡನೆ ಮಾಡಬೇಕಿತ್ತು. ಅಂದಾಜು ಮೂರು ಲಕ್ಷ ವಿದ್ಯಾರ್ಥಿನಿಯರು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ರು. ಕೊನೆಯ ಎರಡು ದಿನಗಳು ಬಾಕಿ ಇರುವಾಗ ವಿದ್ಯಾರ್ಥಿನಿ ನೇತ್ರಾವತಿ ಅರ್ಜಿ ಹಾಕಿದ್ಳು. ನಮ್ಮ ಶಾಲೆಯ ವಿದ್ಯಾರ್ಥಿನಿ ಆಯ್ಕೆಯಾಗಿರೋದು ನಮಗೆ ಖುಷಿ ತಂದಿದೆ ಎಂದರು.
ವಿದ್ಯಾರ್ಥಿನಿ ತಂದೆ ಕೆ ಎಂ ಪಂಪಯ್ಯಸ್ವಾಮಿ ಮಾತನಾಡಿ, ನಾವು ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ನಾಲ್ವರು ಹೆಣ್ಮಕ್ಕಳು ಇದ್ದಾರೆ. ಮುಂದಿನ ವಿದ್ಯಾಭ್ಯಾಸ ಮಾಡಿಸಲಿಕ್ಕೂ ನಮ್ಮ ಬಳಿ ಹಣವಿಲ್ಲ. ಇದೀಗ ನನ್ನ ಮಗಳು ಪ್ರಧಾನಿ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸೋದು ಖುಷಿ ತಂದಿದೆ ಎಂದರು.
ವಿದ್ಯಾರ್ಥಿನಿ ಕೆ.ಎಂ.ನೇತ್ರಾವತಿ ಮಾತನಾಡಿ, ನಾನು ಹಳ್ಳಿಯಿಂದ ದಿಲ್ಲಿಗೆ ಹೋಗಿ, ಪ್ರಧಾನಿ ಮೋದಿಯವರ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸೋದು ನನಗೆ ಖುಷಿ ತಂದಿದೆ ಎಂದು ಹೇಳಿದರು.