ಹೊಸಪೇಟೆ: ಸೂರ್ಯ ಮನೆ ಬಾಗಿಲಿಗೆ ಬೆಳಕು ಚೆಲ್ಲುವ ಮುನ್ನವೇ ಪತ್ರಿಕೆಗಳು ಜನರ ಕೈಗೆ ತಲುಪಿರುತ್ತವೆ. ಪ್ರತಿ ನಿತ್ಯ ಪತ್ರಿಕಾ ವಿತರಕರು ಸುದ್ದಿಗಳನ್ನು ತಲುಪಿಸುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯುಗಾದಿ, ದಸರಾ, ಗಣೇಶ ಚತುರ್ಥಿ, ದೀಪಾವಳಿ ನಾಲ್ಕು ರಜೆಗಳು ವರ್ಷದಲ್ಲಿ ಬರುತ್ತವೆ. ಉಳಿದ ದಿನಗಳಲ್ಲಿ ಮಳೆ, ಗಾಳಿ ಎನ್ನದೇ ಪತ್ರಿಕೆ ಹಂಚುವ ಕಾಯಕ ಇವರದ್ದಾಗಿದೆ.
ಹೊಸಪೇಟೆಯ ಕೆ.ಲಕ್ಷ್ಮಣ ಅವರು ಎಸ್ಎಸ್ಎಲ್ಸಿ ಓದುವ ಸಂದರ್ಭ ರಜಾ ದಿನಗಳಲ್ಲಿ ಪತ್ರಿಕೆಯನ್ನು ವಿತರಿಸುವ ಅಭಿರುಚಿ ಬೆಳೆಸಿಕೊಂಡಿದ್ದರು. 1989 ರಲ್ಲಿ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಸಂಯುಕ್ತ ಕರ್ನಾಟಕದ ಸಂಪಾದಕ ಶ್ಯಾಮರಾವ್ ಅವರು ಬಂದಿದ್ದ ಸಂದರ್ಭದಲ್ಲಿ ಲಕ್ಷ್ಮಣ ಪತ್ರಿಕೆಯನ್ನು ಅವರಿಗೆ ನೀಡುತ್ತಾರೆ. ಆಗ ಲಕ್ಷ್ಮಣ ಅವರ ಕಾರ್ಯವೈಖರಿಯನ್ನು ಕಂಡ ಶ್ಯಾಮರಾವ್ ಅವರು 1990 ರಲ್ಲಿ ನೇರವಾಗಿ ಸಂಯುಕ್ತ ಕರ್ನಾಟಕ ಪತ್ರಿಕೆ ಏಜೆನ್ಸಿಯನ್ನು ನೀಡುತ್ತಾರೆ. ಆಗಿನಿಂದ ಇಲ್ಲಿಯವರೆಗೆ ಪತ್ರಿಕೆಯನ್ನು ವಿತರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಲಕ್ಷ್ಮಣ.
ಇದೇ ಪತ್ರಿಕೆಗೆ 1995 ರಿಂದ ವರದಿಗಾರಿಕೆಯನ್ನು ಪ್ರಾರಂಭಿಸುತ್ತಾರೆ. ಪತ್ರಿಕೆ ವಿತರಣೆ ಜತೆಗೆ ವರದಿಗಾರಿಕೆ ಮಾಡುವ ಮೂಲಕ ಪತ್ರಿಕೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ನಗರದ ಚಿತ್ತವಾಡ್ಗಿ, ಪಟೇಲ ನಗರ, ರಾಣಿಪೇಟೆ, ಬಳ್ಳಾರಿ ರಸ್ತೆ, ಹಂಪಿ ರಸ್ತೆ, ಮೇನ್ ಬಜಾರ್, ಆಕಾಶವಾಣಿ, ಎಂ.ಜೆ. ನಗರ, ನೆಹರು ಕಾಲೊನಿ, ಅಮರಾವತಿ ಸೇರಿದಂತೆ ನಾನಾ ಭಾಗಗಳಲ್ಲಿ ಪತ್ರಿಕೆಗಳನ್ನು ವಿತರಣೆ ಮಾಡುತ್ತಾರೆ. ಈ ಕಾರ್ಯವನ್ನು ಕಳೆದ 30 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕೆ.ಲಕ್ಷ್ಮಣ ಅವರ ಕೈ ಕೆಳಗೆ ಹತ್ತಾರು ಯುವಕರು ಪತ್ರಿಕೆಗಳನ್ನು ವಿತರಿಸುವ ಜವಾಬ್ದಾರಿಯನ್ನು ನೀಡಿದ್ದಾರೆ. ಪತ್ರಿಕೆಯಿಂದ ಬರುವ ಆದಾಯ ಯುವಕರ ಬದುಕಿಗೆ ಅಲ್ಪ ಸಹಾಯವಾಗಿದೆ. ಅಲ್ಲದೇ, ಇವರ ಕೈಯಲ್ಲಿ ಸುಮಾರು ವರ್ಷಗಳಿಂದ ಯುವಕರು ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಲಕ್ಷ್ಮಣ ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಈ ಎರಡು ವೃತ್ತಿಗಳನ್ನು ಮಾಡಿಕೊಂಡು ಒಬ್ಬ ಪುತ್ರನಿಗೆ ಬ್ಯಾಚುಲರ್ ಆಫ್ ಸಿವಿಲ್ ಎಂಜಿನಿಯರಿಂಗ್ ಹಾಗೂ ಪುತ್ರಿಗೆ ಎಂ.ಎ. ಇಂಗ್ಲಿಷ್ ವ್ಯಾಸಂಗ ಮಾಡಿಸಿದ್ದಾರೆ. ಪುತ್ರಿಗೆ ಬಿಕಾಂ ಓದಿಸುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪತ್ರಿಕಾ ವಿತರಣೆಗೆ ಯುವಕರು ಮುಂದಾಗಲಿಲ್ಲ. ಆ ಸಂದರ್ಭದಲ್ಲಿ ಪತ್ರಿಕೆಯನ್ನು ಸ್ವತಃ ತಾವೇ ನಿಂತು ವಿತರಿಸಿದರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರೊನಾ ಭಯದಲ್ಲಿ ಪತ್ರಿಕೆಯನ್ನು ವಿತರಿಸುವ ಕಾಯಕವನ್ನು ಮಾಡಿದ್ದಾರೆ. ಬಳಿಕ ಯುವಕರು ಪತ್ರಿಕೆ ವಿತರಣೆಗೆ ಮುಂದಾದರು. ಸರ್ಕಾರ ಹಾಗೂ ಸ್ಥಳೀಯ ಸುದ್ದಿಗಳನ್ನು ಜನರ ಮನೆ ಬಾಗಿಲಿಗೆ ಪತ್ರಿಕೆ ವಿತರಕರು ಮುಟ್ಟಿಸುವ ಮೂಲಕ ಕೊರೊನಾ ವಾರಿಯರ್ಸ್ ಆಗಿದ್ದಾರೆ.
ಹೊಸಪೇಟೆಯಲ್ಲಿ 10 ಪೇಪರ್ ಏಜೆನ್ಸಿಗಳಿವೆ, ನೂರಾರು ಯುವಕರು ಪತ್ರಿಕಾ ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೊರೊನಾ ಭಯದಲ್ಲೂ ತಮ್ಮ ಕೆಲಸವನ್ನು ಮರೆತಿಲ್ಲ. ಸರ್ಕಾರದಿಂದ ವಿತರಕರಿಗೆ ಹಾಗೂ ಯುವಕರಿಗೆ ಸಹಾಯ ಮಾಡಬೇಕೆನ್ನುವ ಕೂಗು ಕೇಳಿ ಬರುತ್ತಿದೆ.