ಬಳ್ಳಾರಿ: ದೇಶದಾದ್ಯಂತ ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಆದರೂ ಕೂಡ ನಗರದ ಜನತೆ ಕೊರೊನಾ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದಾರೆ. ಅಂತಹವರಿಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ನೇತೃತ್ವದ ತಂಡ ಬಿಸಿ ಮುಟ್ಟಿಸಿದೆ.
ಸೋಮವಾರ ಸಂಜೆ ನಗರದಾದ್ಯಂತ ಮಾಸ್ಕ್ ಜಾಗೃತಿ ಕಾರ್ಯಾಚರಣೆ ನಡೆಸಿ ಸ್ಥಳದಲ್ಲೇ ದಂಡ ವಿಧಿಸಿದ್ದು, ಎರಡು ಗಂಟೆಗಳಲ್ಲಿಯೇ 50 ಸಾವಿರ ರೂ. ದಂಡ ವಸೂಲಿಯಾಗಿದೆ. ನಗರದ ಎಸ್ಪಿ ವೃತ್ತ, ಇನ್ಫೆಂಟ್ರಿ ರಸ್ತೆ, ದುರ್ಗಮ್ಮ ದೇವಸ್ಥಾನ, ಕಪಗಲ್ ರಸ್ತೆ, ಕೌಲ್ ಬಜಾರ್ ಸೇರಿದಂತೆ ವಿವಿಧೆಡೆ ಸಂಚರಿಸಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಯಿತು. ಮಾಸ್ಕ್ ಧರಿಸದೇ ತೆರಳುತ್ತಿದ್ದ ಅನೇಕರಿಗೆ ತಾವೇ ಮಾಸ್ಕ್ ವಿತರಿಸಿ, ಜಾಗೃತಿ ಮೂಡಿಸಿದರು.
ನಗರದ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಲಾವಣ್ಯ, ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು. ಉಲ್ಲಂಘಿಸಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಮಳಿಗೆಗಳಿಗೆ ಬಂದಿದ್ದ ಗ್ರಾಹಕರಿಗೆ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲಿಸಿ ಎಂದು ಸೂಚಿಸಿದರು.
ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘನೆ: ಮೈಸೂರಿನಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 2,49,850 ರೂ. ದಂಡ ವಸೂಲಿ