ಬಳ್ಳಾರಿ: ಜಮೀನಿನ ಸರ್ವೇ ಮಾಡಿ ನಕಾಶೆಯನ್ನು ತಯಾರಿಸಿಕೊಡಲು ಲಂಚ ಕೇಳಿದ ಇಬ್ಬರು ಸರ್ವೇಯರ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಕಂಪ್ಲಿ ಪಟ್ಟಣದ ವಿನಾಯಕ ನಗರದಲ್ಲಿ ಸೋಮವಾರ ಸಂಜೆ ಕಾರ್ಯಾಚರಣೆ ನಡೆದಿದೆ. ಬಳ್ಳಾರಿ ಸರ್ವೇ ಕಚೇರಿಯ ಸಿಬ್ಬಂದಿಯಾದ ಕರಿಬಸಪ್ಪ ಮತ್ತು ವೀರೇಶ್ ಬಂಧಿತರು.
ವ್ಯಕ್ತಿಯೊಬ್ಬರು ಪಟ್ಟಣದಲ್ಲಿನ ತನ್ನ 1.76 ಎಕರೆ ಹಾಗೂ 1 ಎಕರೆ ಸೇರಿ ಒಟ್ಟು 2.76 ಎಕರೆ ಜಮೀನಿನ ಹದ್ದುಬಸ್ತು ಅಳತೆ ಮತ್ತು ನಕಾಶೆ ಸಿದ್ಧಪಡಿಸಿಕೊಡುವಂತೆ ಕಂಪ್ಲಿಯ ಸರ್ವೇ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡು ಅರ್ಜಿಗಳಿಗೆ ಸೇರಿ 4,200 ರೂ. ಶುಲ್ಕ ಪಾವತಿಸಿದ್ದರು. ಈ ಜಮೀನುಗಳ ಸರ್ವೇಗೆ ಆಗಮಿಸಿದ್ದ ಸರ್ವೇ ಅಧಿಕಾರಿಗಳಾದ ಕರಿಬಸಪ್ಪ ಮತ್ತು ವೀರೇಶ್ ಜಮೀನಿನ ಸರ್ವೇ ಮಾಡಿ ನಕಾಶೆ ತಯಾರಿಸಿಕೊಡಲು 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಾತುಕತೆಯ ಬಳಿಕ 3 ಸಾವಿರ ರೂ ನೀಡಲು ಅರ್ಜಿದಾರ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಈ ಕುರಿತು ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಲೋಕಾಯುಕ್ತ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕರಿಬಸಪ್ಪ ಮತ್ತು ವೀರೇಶ್ ವಿರುದ್ಧ ದೂರು ನೀಡಿದ್ದರು. ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ವಿನಾಯಕ ನಗರದಲ್ಲಿನ ತಮ್ಮ ನಿವಾಸದಲ್ಲಿ ಕರಿಬಸಪ್ಪ 3 ಸಾವಿರ ರೂ.ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಹಿಡಿಡಿದ್ದಾರೆ. ಹಣದ ಸಮೇತ ಸರ್ವೇ ಅಧಿಕಾರಿಗಳಾದ ಕರಿಬಸಪ್ಪ ಮತ್ತು ವೀರೇಶ್ ಅವರನ್ನು ಬಂಧಿಸಿದ್ದಾರೆ.
ಲಂಚಕ್ಕೆ ಕೈಚಾಚಿದ ಪ.ಪಂಚಾಯತ್ ಸದಸ್ಯನ ಸದಸ್ಯತ್ವ ರದ್ದು: ಲಂಚ ಸ್ವೀಕರಿಸಿದ್ದ ಜೋಗ-ಕಾರ್ಗಲ್ ಪಟ್ಟಣ ಪಂಚಾಯತಿ ಸದಸ್ಯನ ಸದಸ್ಯತ್ವ ರದ್ದುಗೊಳಿಸಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಹರೀಶ್ ಗೌಡ ಪಟ್ಟಣ ಪಂಚಾಯಿತಿ ಸದಸ್ಯತ್ವ ಕಳೆದುಕೊಂಡವರು. ಇವರು ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿಯ 8ನೇ ವಾರ್ಡ್ನ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದರು.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಸದಸ್ಯನ ಸದಸ್ಯತ್ವ ರದ್ದು