ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ವಿ.ವಿ.ಯಲ್ಲಿ ಓಡಾಡದಂತೆ ಸೂಚನೆ: ವಿವಿಯ ಆಡಳಿತಾಂಗ ಈಗಾಗಲೇ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಒಬ್ಬಂಟಿಯಾಗಿ ಓಡಾಡದಂತೆ ಸೂಚನೆಯನ್ನು ನೀಡಿದೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಲೈಟಿಂಗ್ ಅಳವಡಿಸಲಾಗಿದೆ.
ಬೋನ್ ಸಮಸ್ಯೆ: ಚಿರತೆ ಕಾಣಿಸಿಕೊಂಡರೂ ಕೂಡ ಈವರೆಗೆ ಬೋನ್ ಅಳವಡಿಸಿಲ್ಲ. ಅರಣ್ಯ ಇಲಾಖೆಯು ಬೋನ್ ಸಮಸ್ಯೆಯನ್ನು ಎದುರಿಸುತ್ತಿದ್ದು, ವಿವಿ ಆವರಣದಲ್ಲಿ ಬೋನ್ ಅಳವಡಿಸಲು ಸಾಧ್ಯವಾಗಿಲ್ಲ.
ಕುಲಪತಿ ಡಾ. ಸ.ಚಿ. ರಮೇಶ ಮಾತನಾಡಿ, ಚಿರತೆ ಪದೇ-ಪದೆ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೂ ಸಹ ಚಿರತೆ ಬಂದು ಹೋಗುತ್ತಿದೆ. ಕ್ಯಾಂಪಸ್ನಲ್ಲಿನ ನಾಯಿಗಳನ್ನು ಚಿರತೆ ಕೊಂದು ತಿಂದಿರುವ ಉದಾಹರಣೆಗಳಿವೆ. ಹಾಗಾಗಿ ವಿವಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಬೋನ್ ಅಳವಡಿಸಿ, ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದರು.