ಬಳ್ಳಾರಿ: ಮೊಸರು ಗಡಿಗೆಯನ್ನು ಒಡೆಯುವ ಮೂಲಕ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಬಳ್ಳಾರಿ ನಗರದ ರಾಯಲ್ ಕಾಲೊನಿಯ ಶ್ರೀಕೃಷ್ಣ ಮಂದಿರದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯಿಂದ ಆಯೋಜಿಸಿದ್ದ, ಈ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು. ಕೃಷ್ಣಜನ್ಮಾಷ್ಠಮಿ ನಿಮಿತ್ತ ರಾಯಲ್ ಕಾಲೋನಿಯ ಮನೆ ಮತ್ತು ಕೃಷ್ಣ ದೇಗುಲವನ್ನು ಫಲಪುಷ್ಪಾಧಿಗಳಿಂದ ಅಲಂಕಾರ ಮಾಡಲಾಗಿತ್ತು. ಕೃಷ್ಣನ ಪುಟ್ಟ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಕೃಷ್ಣನ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಿ ಮಹಿಳೆಯರು ಸಂಭ್ರಮಿಸಿದರು.
ಅಲ್ಲದೇ ನಾನಾ ಖಾದ್ಯ, ತಿಂಡಿ, ತಿನಿಸುಗಳನ್ನು ಮಾಡಿ ಬಾಲ ಕೃಷ್ಣನನ್ನು ಪೂಜೆ ಮಾಡಲಾಯಿತು. ಬೆಳಿಗ್ಗೆಯಿಂದಲೇ ಗೋಪಾಲ ಕಾವಳಿ ಕಾರ್ಯಕ್ರಮ, ಚಿಣ್ಣರಿಂದ ಕೃಷ್ಣನ ವೇಷ ಭೂಷಣ ಸ್ಪರ್ಧೆ, ಶಾರದಾ ನೃತ್ಯ ಕಲಾ ಸಂಘದ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ, ಧಾರವಾಡದ ಜಯತೀರ್ಥ ಮೇವುಂಡಿ ಅವರ ಹರಿದಾಸ ಕಾರ್ಯಕ್ರಮ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕೃಷ್ಣನ ವೇಷಭೂಷಣ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ಸುಂದರ ಬಾಲಕೃಷ್ಣರಾಗಿ ಕಾಣುವ ಮೂಲಕ ಕಣ್ಮನ ಸೆಳೆದರು. ನಂತರ ನಡೆದ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ಕೂಡ ನಾಮುಂದು ತಾಮುಂದು ಎಂದು ಗಡಿಗೆ ಒಡೆದು ಸಂಭ್ರಮಿಸಿದರು. ಈ ವೇಳೆ ದೇಗುಲದ ಮುಖಂಡರಾದ ಪ್ರಕಾಶರಾವ್, ಪ್ರಾಣೇಶ ರಾವ್, ರಘುರಾಮ್, ಕೃಷ್ಣಮೂರ್ತಿ, ಎಸ್ ಕೆ ರಾಘವೇಂದ್ರ, ಪಟವಾರಿ, ಮೋಹನ್ ಮುತಾಲಿಕ್, ವೆಂಕಟೇಶ, ಚಿದಂಬರ, ಶೋಭಾ, ಸುನಿತಾ, ಸಹನಾ, ಕವಿತಾ ಕುಲಕರ್ಣಿ ಉಪಸ್ಥಿತದ್ದರು.