ಬಳ್ಳಾರಿ: ಬಿರು ಬಿಸಿಲು ಹಾಗೂ ಒಣಹವೆಗೆ ನಲುಗಿ ಹೋಗಿದ್ದ ಗಣಿನಗರಿ ಬಳ್ಳಾರಿಯಲ್ಲಿ ನಿನ್ನೆ ಸಂಜೆ ಸುರಿದ ಮಳೆ ಕೆಂಡದಂತೆ ಕಾದಿದ್ದ ಧರೆಯನ್ನು ತಂಪುಗೊಳಿಸಿದೆ.
ಬಳ್ಳಾರಿ ನಗರ ಸೇರಿದಂತೆ ಜಾಲಿಹಾಳು, ಮೋಕಾ, ಮಸೀದಿ ಪುರ, ಸಂಗನಕಲ್ಲು, ಬಿಸಿಲಹಳ್ಳಿ, ಬೇವಿನ ಹಳ್ಳಿ, ಅಮರಾಪುರ, ಹಗರಿ, ಕಾರೇಕಲ್ಲು- ವೀರಾಪುರ, ಗೋಡೆ ಹಾಳು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಸುರಿದ ಮಳೆಯಿಂದಾಗಿ ಕೆಲವೆಡೆ ಮರಗಳ ಧರೆಗುರುಳಿದ್ದು, ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಿನ್ನೆಯಿಂದ ಮೋಡಕವಿದ ವಾತಾವರಣ ಮುಂದುವರೆದಿದ್ದು, ತಾಪಮಾನ ಕೊಂಚ ತಗ್ಗಿದೆ.
ಇತ್ತ ವಿಜಯಪುರದಲ್ಲೂ ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆಯಾಗಿದ್ದು, ಅಧಿಕ ತಾಪಮಾನದಿಂದ ಬೇಸತ್ತಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಒಂದು ವಾರದಿಂದ ಗರಿಷ್ಠ 43 ಡಿಗ್ರಿ ತಾಪಮಾನ ದಾಖಲಾಗಿತ್ತು. ಬಿಸಿಲಿನ ಬೇಗೆಯಿಂದ ಮನೆಯಿಂದ ಹೊರ ಬರಲು ಹೆದರುತ್ತಿದ್ದ ಜನರ ಮೊಗದಲ್ಲಿ ವರುಣ ಮಂದಹಾಸ ಮೂಡಿಸಿದ್ದಾನೆ.
ರಾಯಚೂರು ಜಿಲ್ಲೆಯ ವಿವಿಧೆಡೆ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಲಿಂಗಸೂಗೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಇಷ್ಟು ದಿನಗಳ ಕಾಲ ಬಿಸಿಲಿಗೆ ಕಾದು ಕೆಂಡವಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದು, ರೈತ ಮುಖದಲ್ಲಿ ಮದಹಾಸ ಮೂಡಿದೆ.