ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಅಯೋಗ್ಯ ಮಂತ್ರಿಯಾಗಿದ್ದಾರೆಂದು ಹೇಳುವ ಮೂಲಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಕಿಡಿಕಾರಿದ್ದಾರೆ.
ಬಳ್ಳಾರಿಯ ಸರ್ಕಾರಿ ಅತಿಥಿ ಗೃಹದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಶ್ರೀರಾಮುಲು ಆರೋಗ್ಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸದ ಕಾರಣ, ಮುಖ್ಯಮಂತ್ರಿ ಅವರು ಡಾ.ಸುಧಾಕರ್ಗೆ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನ ವಹಿಸಿದ್ದಾರೆ. ಅವರಿಬ್ಬರ ನಡುವೆ ಶೀಥಲ ಸಮರ ಶುರುವಾಗಿದ್ದರಿಂದ, ಸಚಿವ ಸುರೇಶ್ ಕುಮಾರ್ ಅವರಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನ ನೀಡುತ್ತಾರೆ. ಅಲ್ಲಿಂದ ಈಗ ಸಚಿವ ಆರ್. ಅಶೋಕ್ ಅವರಿಗೆ ವರ್ಗಾವಣೆ ಮಾಡಲಾಗಿದೆ. ಒಂದು ಖಾತೆಯನ್ನೂ ಸಮರ್ಥವಾಗಿ ನಿಭಾಯಿಸದ ನಿಮಗೆ ಸಚಿವ ಸ್ಥಾನದ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಕೋವಿಡ್ ಸಂದರ್ಭ ಆರೋಗ್ಯ ಇಲಾಖೆ ಬಿ. ಶ್ರೀರಾಮುಲು ಅವರ ಕೈಯಲ್ಲಿರೋದು ಸೂಕ್ತವಲ್ಲ. ಮತ್ಯಾರಿಗೋ ಆ ಖಾತೆಯನ್ನ ಹಂಚಿಕೆ ಮಾಡಬೇಕೆಂದು ರವಿ ಕೃಷ್ಣಾರೆಡ್ಡಿ ಒತ್ತಾಯಿಸಿದ್ರು.
ಸ್ವಾಭಿಮಾನಿ ಶ್ರೀರಾಮುಲುಗೆ ಸ್ವಾಭಿಮಾನ ಇದೆಯೇ?:
ಸ್ವಾಭಿಮಾನಿ ಶ್ರೀರಾಮುಲು ಎಂದೇ ಜನಪ್ರಿಯತೆ ಗಳಿಸಿರುವ ನಿಮಗೇನಾದ್ರೂ ಸ್ವಾಭಿಮಾನ ಇದ್ದರೆ, ಕೂಡಲೇ ಆರೋಗ್ಯ ಇಲಾಖೆ ಖಾತೆಯನ್ನ ತೊರೆದು ರಾಜೀನಾಮೆ ಕೊಡಬೇಕು. ಕೋವಿಡ್ ನಿಯಂತ್ರಣದ ಸಾಧಕ- ಬಾಧಕಗಳ ಕುರಿತು ನಿಮಗೇನು? ಗೊತ್ತಿದೆ. ಕೇವಲ ಆರೋಗ್ಯ ಇಲಾಖೆಯಲ್ಲ, ನೀವು ಯಾವ ಖಾತೆಯನ್ನೂ ಜವಾಬ್ದಾರಿಯಿಂದ ನಿಭಾಯಿಸುವ ಚಾಣಕ್ಷತನ ನಿಮಗಿಲ್ಲ. ದಯವಿಟ್ಟು ಸಿಎಂ ಬಿಎಸ್ವೈ ಅವರು ಕೂಡಲೇ ಇದನ್ನರಿತುಕೊಂಡು ಆರೋಗ್ಯ ಇಲಾಖೆಯನ್ನ ನುರಿತ ತಜ್ಞ ವೈದ್ಯರು ಅಥವಾ ಬುದ್ಧಿವಂತರಿಗೆ ವಹಿಸೋದು ಸೂಕ್ತ ಎಂದು ಆಗ್ರಹಿಸಿದ್ರು.