ಬಳ್ಳಾರಿ : ಟಿಬಿ ಸ್ಯಾನಿಟೋರಿಯಂದಲ್ಲಿರುವ ಸೂಪರ್ ಸ್ಪೆಷಾಲಿಟಿ ಟ್ರಾಮಾ ಕೇರ್ ಸೆಂಟರ್ ನಾನ್ ಕೋವಿಡ್ ಆಗಿ ಪರಿವರ್ತನೆ ಮಾಡಲು ಜಿಲ್ಲಾಡಳಿತ ಹಾಗೂ ವಿಮ್ಸ್ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಕುರಿತು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಟ್ರಾಮಾ ಕೇರ್ ಸೆಂಟರ್ನಲ್ಲಿ ಅಂದಾಜು 200 ಹಾಸಿಗೆಯುಳ್ಳ ಬೆಡ್ಗಳು ಸಂಪೂರ್ಣ ಹವಾ ನಿಯಂತ್ರಿತವಾಗಿವೆ. ಪ್ರತಿ ತಿಂಗಳಿಗೆ ಅಂದಾಜು ₹12 ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಬರುತ್ತಿದೆ. ಹೀಗಾಗಿ, ಟ್ರಾಮಾ ಕೇರ್ ಸೆಂಟರ್ ನಿರ್ವಹಣೆ ವೆಚ್ಚ ಕೂಡ ಹೆಚ್ಚಾಗುತ್ತಿದೆ.
ಪರ್ಯಾಯವಾಗಿ ಹಳೆಯ ದಂತ ಮಹಾವಿದ್ಯಾಲಯ ಕಾಲೇಜಿನಲ್ಲಿ ಈ ಕೋವಿಡ್ ಪಾಸಿಟಿವ್ ಕೇಸ್‌ಗಳನ್ನು ದಾಖಲಿಸಲು ಅನುಕೂಲವಾಗಲಿದೆ. ಅನುದಾನದ ಕೊರತೆ ಇರುವುದರಿಂದ ಜಿಲ್ಲಾಡಳಿತ ಹಾಗೂ ವಿಮ್ಸ್ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಸರ್ಕಾರದ ತೀರ್ಮಾನದ ಬಳಿಕ ನಿರ್ಧಾರ : ಈ ಕುರಿತು ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಟ್ರಾಮಾ ಕೇರ್ ನಿರ್ವಹಣೆ ಹಾಗೂ ಖರ್ಚು- ವೆಚ್ಚದ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದೆ. ಈ ಸೆಂಟರ್‌ನ ನಾನ್ ಕೋವಿಡ್ ಆಗಿ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ಅಲ್ಲಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಇದಲ್ಲದೆ ಟ್ರಾಮಾ ಕೇರ್ ಸೆಂಟರ್ನಲ್ಲಿ ಅಂದಾಜು 90 ಮಂದಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಅವರೆಲ್ಲರ ಅವಧಿಯು ಮಾರ್ಚ್ 31 ಕೊನೆಯದ್ದಾಗಿದೆ. ಅವರಿಗೆ 8 ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಅದನ್ನು ಕ್ಲಿಯರ್ ಮಾಡಲಾಗುವುದು ಎಂದರು.
ಓದಿ: ಸಿದ್ದರಾಮಯ್ಯ ಆಯೋಜಿಸಿದ್ದ ಭೋಜನ ಕೂಟಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ ತನ್ವೀರ್ ಸೇಠ್!
ಬದುಕು ದುಸ್ತರ ಆಗಲಿದೆ : ಈ ಕುರಿತಂತೆ ಟ್ರಾಮಾ ಕೇರ್ ಸೆಂಟರ್ ಮೇಲ್ವಿಚಾರಕ ರಾಜಶೇಖರ ಮಾತನಾಡಿ, ಕೋವಿಡ್ ವೇಳೆ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದ್ದೆವು. ಆದರೀಗ ಏಕಾಏಕಿ ಸೆಂಟರ್‌ನ ಮುಚ್ಚುವ ಮಾತುಗಳನ್ನಾಡುತ್ತಿದ್ದಾರೆ.
ಮಾರ್ಚ್ 31ಕ್ಕೆ ನಮ್ಮ ಸೇವಾವಧಿ ಕೊನೆಯಾಗಿಸಿದ್ದಾರೆ. ಎಂಟು ತಿಂಗಳ ವೇತನ ಕೂಡ ಬಾಕಿ ಉಳಿಸಿಕೊಂಡಿದ್ದಾರೆ. ನಮ್ಮ ಸೇವಾವಧಿಯನ್ನು ಇಲ್ಲಿಗೆ ಕೈ ಬಿಟ್ಟರೆ, ನಮ್ಮಗಳ ಬದುಕು ದುಸ್ತರವಾಗಲಿದೆ ಎಂದು ಅಳಲು ತೋಡಿಕೊಂಡರು.