ಬಳ್ಳಾರಿ: ಪ್ರಚೋದನಕಾರಿ ಭಾಷಣದ ಆರೋಪ ಹೊತ್ತಿರುವ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹಾಗೂ ಸಂಸದ ತೇಜಸ್ವಿಸೂರ್ಯ ಪ್ರಚೋದನಕಾರಿ ಭಾಷಣ ಮಾಡಿರೋದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪನವ್ರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಈವರೆಗೂ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದೇ ಇರೋದು ಬಿಜೆಪಿಯೇ ಅವರಿಬ್ಬರ ಪ್ರಚೋದನಕಾರಿ ಭಾಷಣಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂಬುದು ಸಾಬೀತಾಗಿದೆ ಎಂದು ದೂರಿದ್ದಾರೆ.
ಪ್ರಚೋದನಕಾರಿ ಭಾಷಣ ಮಾಡಿಸೋದೆ ಬಿಜೆಪಿ ಹಾಗೂ ಸಂಘ ಪರಿವಾರದ ಅಜೆಂಡಾ ಆಗಿತ್ತು ಅಂತ ಕಾಣಿಸುತ್ತೆ ಎಂದು ಅವರು ಆರೋಪಿಸಿದರು. ಕೇಂದ್ರ-ರಾಜ್ಯದಲ್ಲಿ ಬೇಹುಗಾರಿಕೆ ಇಲಾಖೆ (ಗುಪ್ತಚರ) ದಾರಿ ತಪ್ಪಿದಂತೆ ಕಾಣಿಸುತ್ತೆ. ಇಂತಹ ಪ್ರಚೋದನಕಾರಿ ಭಾಷಣ ಮಾಡಿದ್ರೂ ಕೂಡ ಬೇಹುಗಾರಿಕೆ ಇಲಾಖೆ ಪಾತ್ರವೇನು? ಎಂಬುದನ್ನು ಈ ಮೂಲಕ ಸಾಬೀತಾಗಿದೆ ಎಂದರು. ರಾಜ್ಯದ ನೆರೆ ಸಂತ್ರಸ್ಥರ ಪರಿಹಾರಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಯವರ ಬಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಮ್ಮಯ್ಯ ಎಂದ್ರು. ಇನ್ನೇನು ಕಾಲಿಗೆ ಬೀಳೋದೊಂದೆ ಬಾಕಿಯಿತ್ತು. ಆದ್ರೆ ಏನೂ ಪ್ರಯೋಜನವಾಗಲಿಲ್ಲ ಎಂದರು.
ಪೌರತ್ವ (ತಿದ್ದುಪಡಿ) ಕಾಯಿದೆ ಪರವಾಗಿ ಬಿಜೆಪಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಪ್ರಬಲ ವಿರೋಧದ ನಡುವೆಯೂ ಈ ಅಭಿಯಾನ ಹಮ್ಮಿಕೊಂಡಿರೋದು ತರವಲ್ಲ. ಸಂಘ-ಪರಿವಾರದ ಮುಖಂಡರು ಏತಕ್ಕೆ ಮೌನಿಯಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ಎಂ.ಪಾಟೀಲ, ಅಸುಂಡಿ ನಾಗರಾಜ ಗೌಡ, ವೆಂಕಟೇಶ ಹೆಗಡೆ, ಕಲ್ಲುಕಂಭ ಪಂಪಾಪತಿ, ಕೊಳ ಗಲ್ಲು ಅಂಜಿನಿ ಸೇರಿದಂತೆ ಇತರರು ಇದ್ದರು.