ಬಳ್ಳಾರಿ: ಹಂಪಿಗೆ ಆಗಮಿಸಿದ ವಿದೇಶಿ ಪ್ರವಾಸಿಗನೊಬ್ಬ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಭದ್ರತಾ ಸಿಬ್ಬಂದಿ ತಲೆಗೆ ಗಾಯವಾಗಿದೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಕಮಲ ಮಹಲ್ನ ಮೇಲ್ಭಾಗ ಹತ್ತಲು ವಿದೇಶಿಗ ಮುಂದಾಗಿದ್ದಾನೆ. ಅದರ ಮೇಲೆ ಹತ್ತುವ ಅವಕಾಶವಿಲ್ಲ ಎಂದು ಸಿಬ್ಬಂದಿ ಆತನನ್ನು ತಡೆದಿದ್ದಾನೆ. ಅದನ್ನು ಲೆಕ್ಕಿಸದೇ ವಿದೇಶಿಗ ಮೇಲೆ ಏರಿದ್ದಾನೆ.
ಸಿಬ್ಬಂದಿ ಧರ್ಮರಾಜ್ ಮೇಲೆ ವಿದೇಶಿ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಗಾಂಜ ಸೇವನೆ ಮಾಡಿ ವಿದೇಶಿ ವ್ಯಕ್ತಿ ಕಮಲ್ ಮಹಲ್ ಮೇಲಿನಿಂದ ಜಿಗಿದು ಸಿಬ್ಬಂದಿಗೆ ಕಾಲಿನಿಂದ ಒದ್ದಿದ್ದಾನೆ. ಆಗ ಗನ್ ಕೆಳಗೆ ಬಿದ್ದಿದೆ. ಆದನ್ನು ಹಿಡಿದ ವಿದೇಶಿಗ ಗನ್ ಮ್ಯಾನ್, ಸಿಬ್ಬಂದಿ ಮೇಲೆ ಫೈರ್ ಮಾಡಲು ಮುಂದಾಗಿದ್ದಾನೆ. ಬಳಿಕ ಪ್ರವಾಸಿಗರು ಕಮಲ್ ಮಹಲ್ನಿಂದ ಹೊರಗಡೆ ಓಡಿ ಬಂದಿದ್ದಾರೆ.
ಆದರೆ, ಬಂದೂಕಿನಲ್ಲಿ ಗುಂಡು ಇಲ್ಲದ ಕಾರಣ ಯಾವುದೇ ಸಾವು ಆಗಿಲ್ಲ. ಸಿಬ್ಬಂದಿಗೆ ಗನ್ ಬ್ಯಾರಲ್ನಿಂದ ತಲೆಗೆ ಹೊಡೆದಿದ್ದಾನೆ. ಸಿಬ್ಬಂದಿ ಧರ್ಮರಾಜ್ ತಲೆಗೆ ಗಾಯವಾಗಿದೆ. ಗಾಯಗೊಂಡ ಸಿಬ್ಬಂದಿ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.