ವಿಜಯನಗರ/ಹೈದರಾಬಾದ್: ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದ 12ನೇ ವಾರ್ಡಿನಲ್ಲಿ ಹುಚ್ಚು ನಾಯಿಯೊಂದು ದಾಳಿ ಮಾಡಿದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿದಂತೆ 6 ಮಂದಿಗೆ ಗಾಯಗಳಾಗಿವೆ. ಪಟ್ಟಣದ 12ನೇ ವಾರ್ಡ್ ವ್ಯಾಪ್ತಿಯಯಲ್ಲಿನ ನವೋದಯ ಕೋಚಿಂಗ್ ಮುಗಿಸಿ ಮನೆಗೆ ತೆರಳುವ ವಿದ್ಯಾರ್ಥಿಗಳು ಸೇರಿದಂತೆ ಹಲವು ಜನರ ಮೇಲೆ ಹುಚ್ಚು ನಾಯಿಯು ಏಕಾಏಕಿ ದಾಳಿ ನಡೆಸಿದೆ.
ದಾರಿ ಮಧ್ಯೆ ಸಿಕ್ಕ ಸಿಕ್ಕವರ ಮೇಲೆ ಎರಗಿದ ನಾಯಿಯು ಬೆನ್ನು, ತೊಡೆ, ಕೈ, ಕಾಲು, ಮುಖದ ಭಾಗಕ್ಕೆ ಕಚ್ಚಿದೆ. ನಂತರ ಬೀದಿ ನಾಯಿಗಳಿಗೆ ಕಚ್ಚಿದೆ. ಘಟನೆ ಕಂಡ ಸ್ಥಳೀಯರು ವಿದ್ಯಾರ್ಥಿಗಳನ್ನು ಬಿಡಿಸಿಕೊಂಡು ಹುಚ್ಚುನಾಯಿಯನ್ನು ಹೊಡೆದು ಹಾಕಿದ್ದಾರೆ. ನಾಯಿ ಕಡಿತದಿಂದ ಗಾಯಗೊಂಡಿರುವವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚಿಗೆ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿರುವುದರಿಂದ ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರ ಬಂದು ಓಡಾಡಲು ಭಯಪಡುವಂತಾಗಿದೆ. ನಾಯಿಗಳನ್ನು ಹಿಡಿಯಬೇಕೆಂದು ಸ್ಥಳೀಯರು ಪ ಟ್ಟಣ ಪಂಚಾಯತ್ನ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕ ಬಲಿ: ಬೀದಿ ನಾಯಿಗಳ ದಾಳಿಗೆ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ. ದಾಳಿ ಮಾಡಿದ ನಾಯಿಗಳಿಂದ ಪಾರಾಗಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೇ ಬಾಲಕ ಉಸಿರು ಚೆಲ್ಲಿದ್ದಾನೆ. ಗಂಭೀರ ಗಾಯಗಳ ಪರಿಣಾಮ ಬಾಲಕ ಆಸ್ಪತ್ರೆಗೆ ತಲುಪುವ ಮುನ್ನವೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇನ್ನು, ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಾಲಕನ ತಂದೆ ಗಂಗಾಧರ್ ನಿಜಾಮಾಬಾದ್ ಜಿಲ್ಲೆಯ ಇಂದಲವಾಯಿ ಮಂಡಲದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. ನಂಬರ್ 6 ರ ಚೌರಸ್ತಾದಲ್ಲಿರುವ ಕಾರ್ ಸರ್ವೀಸ್ ಸೆಂಟರ್ ನಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಹೈದರಾಬಾದ್‌ನಲ್ಲಿ ತಮ್ಮ ಪತ್ನಿ ಜನಪ್ರಿಯ, ಆರು ವರ್ಷದ ಮಗಳು ಮತ್ತು ಪುತ್ರ ಪ್ರದೀಪ್ (4) ಅವರೊಂದಿಗೆ ಬಾಗ್ ಅಂಬರ್‌ಪೇಟ್‌ನ ಎರುಕುಲ ಬಸ್ತಿಯಲ್ಲಿ ವಾಸವಾಗಿದ್ದಾರೆ.
ಭಾನುವಾರದಂದು ರಜೆ ಇದ್ದುದರಿಂದ ಮಕ್ಕಳಿಬ್ಬರನ್ನೂ ತಾನು ಕೆಲಸ ಮಾಡುತ್ತಿದ್ದ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಮಗಳನ್ನು ಪಾರ್ಕಿಂಗ್ ಲಾಟ್‌ನ ಕ್ಯಾಬಿನ್‌ನಲ್ಲಿ ಕೂರಿಸಿ, ಮಗನನ್ನು ಸರ್ವೀಸ್ ಸೆಂಟರ್‌ಗೆ ಕರೆದೊಯ್ದಿದ್ದಾರೆ. ಮಗ ಪ್ರದೀಪ್ ಆಟವಾಡುತ್ತಿದ್ದು, ತಂದೆ ಗಂಗಾಧರ್ ಮತ್ತೋರ್ವ ವಾಚ್‌ಮನ್ ಜೊತೆ ಕೆಲಸಕ್ಕೆಂದು ಬೇರೆ ಕಡೆ ತೆರಳಿದ್ದರು. ಈ ವೇಳೆ ಬಾಲಕ ಸ್ವಲ್ಪ ಹೊತ್ತು ಆಟವಾಡಿ ತನ್ನ ಸಹೋದರಿಯನ್ನು ಹುಡುಕಲು ಕ್ಯಾಬಿನ್ ಕಡೆಗೆ ಹೋಗುತ್ತಿದ್ದಾಗ ಬೀದಿ ನಾಯಿಗಳು ಏಕಾಏಕಿ ಅಟ್ಟಿಸಿಕೊಂಡು ಹೋಗಿವೆ.
ಭಯಗೊಂಡ ಬಾಲಕ ಅವುಗಳಿಂದ ತಪ್ಪಿಸಿಕೊಳ್ಳಲು ಓಡಿ ಬಂದರೂ ಬಿಡದ ನಾಯಿಗಳು ಆತನ ಮೇಲೆ ಎಗರಿ ಕಚ್ಚಿವೆ. ದಾಳಿಯ ಭೀಕರತೆ ಹೇಗಿತ್ತು ಎಂದರೆ ನಾಯಿಯೊಂದು ಆತನ ಕಾಲು ಹಾಗೂ ಇನ್ನೊಂದು ಕೈಯನ್ನು ಹಿಡಿದು ಒಂದು ಬದಿಗೆ ಎಳೆದಾಡಿದೆ. ಇದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ತಮ್ಮನ ಕೂಗು ಕೇಳಿಸಿಕೊಂಡ ಆತನ ಸಹೋದರಿ ಓಡಿ ಬಂದು ತಂದೆಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಬಂದ ತಂದೆ ಗಂಗಾಧರ ನಾಯಿಯ ದಾಳಿಯಿಂದ ಮಗನನ್ನು ರಕ್ಷಿಸಿ, ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಕಾಡಾನೆ ದಾಳಿಗೆ ಇಬ್ಬರು ಬಲಿ: ಸ್ಥಳೀಯರಿಂದ ಆಕ್ರೋಶ, 15 ಲಕ್ಷ ಪರಿಹಾರ ಘೋಷಿಸಿದ ಡಿಸಿ