ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಮಹಿಳೆ ಸೇರಿದಂತೆ ತಾಲ್ಲೂಕಿನಲ್ಲಿ ಮೂರು ಜನಕ್ಕೆ ಕೊರೊನಾ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ಹೇಳಿದ್ದಾರೆ.
ಜೂನ್ 10ರಂದು ಗೋವಾದಿಂದ ಬಂದಿದ್ದ 35 ವರ್ಷದ ಮಹಿಳೆಯ ಗಂಟಲು ದ್ರವವನ್ನು ಜೂನ್ 11 ರಂದು ಸಂಗ್ರಹ ಮಾಡಿ ಪರೀಕ್ಷೆಗೆ ಕಳಿಸಲಾಗಿತ್ತು. ಅದರಂತೆ ಜಿಂದಾಲ್ ಕಂಪನಿಯೇ ಸಂಪರ್ಕ ಹೊಂದಿರುವ ಚೌಡಪುರ ಗ್ರಾಮದ 30 ವರ್ಷದ ಹಾಗೂ ಯಾರ್ರಗುಂಡ್ಲಹಟ್ಟಿಯ 28 ವರ್ಷದ ಪುರುಷನಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಇವರ ದ್ರವ ಸಂಗ್ರಹವನ್ನು ಇದೇ ಜೂನ್ 11ರಂದು ಸಂಗ್ರಹ ಮಾಡಲಾಗಿತ್ತು ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.
ಕಂಟೈನ್‌ಮೆಂಟ್ ಝೋನ್:
ಪಟ್ಟಣದ ಮಹಿಳೆ ವಾಸವಿದ್ದ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಎಂದು ಸುಮಾರು 200 ಮೀಟರ್ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಕಂಟೈನ್‌ಮೆಂಟ್ ಝೋನ್‌ನಲ್ಲಿ ಪ್ರತಿದಿನ ಹಾಗೂ ಬಫರ್ ಝೋನ್‌ನಲ್ಲಿ ಮೂರು ದಿನಕ್ಕೊಮ್ಮೆ ಮನೆ ಮನೆ ಸಮೀಕ್ಷೆ ಮಾಡಲು ಆರೋಗ್ಯ ಇಲಾಖೆಯಿಂದ ಮೂರು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಧಿಕಾರಿ ಡಾ.ಷಣ್ಮುಖ ನಾಯ್ಕ್ ಮಾಹಿತಿ ನೀಡಿದ್ದಾರೆ.
ಈ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಹೆಚ್. ಮಹಾಬಲೇಶ್ವರ, ತಾಲೂಕು ವೈದ್ಯಾಧಿಕಾರಿ ಷಣ್ಮುಖ ನಾಯ್ಕ್, ಪಟ್ಟಣ ಪಂಚಾಯತ್ ಅಧಿಕಾರಿ ಪಕ್ರುದ್ದೀನ್, ಮುಖ್ಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ನಿರ್ಬಂಧಿತ ವಲಯದಲ್ಲಿ ಸಿದ್ಧತೆ ನಡೆಸಿದರು. ಸ್ಥಳಕ್ಕೆ ಸಿಪಿಐ ಪಂಪನಗೌಡ, ಪಿ.ಎಸ್.ಐ ತಿಮ್ಮಣ್ಣ ಚಾಮನೂರು ಆಗಮಿಸಿದ್ದರು.