ಬಳ್ಳಾರಿ: ನಗರದ 4 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಹೊರ ಮತ್ತು ಒಳ ಚರಂಡಿ ಸ್ವಚ್ಛತೆ ಕೊರತೆ, ಬೀದಿ ದೀಪ ಇಲ್ಲದೇ ಇರುವ ಕಾರಣಗಳಿಂದ ಸಾರ್ವಜನಿಕರಿಗೆ ಬಹಳ ಸಮಸ್ಯೆಯಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷದ ಸ್ಥಿರಾಸ್ತಿ ಮತ್ತು ಸ್ವತ್ತುಗಳ ರಾಜ್ಯ ಸಮಿತಿ ಸದಸ್ಯ ಜೆ.ಎಸ್. ಅಂಜನೇಯಲು ತಿಳಿಸಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಸಾರ್ವಜನಿಕರು ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬರುತ್ತೆ. ಆದರೂ ಅಗತ್ಯ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ ಬಗ್ಗೆ ಏಕೆ ಗಮನಹರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಬಳ್ಳಾರಿಯಲ್ಲಿ ರಾತ್ರಿ 2 ಗಂಟೆಗೆ ಕುಡಿಯುವ ನೀರು ಬಿಡುವುದರಿಂದ ಜನರಿಗೆ ವಿಪರೀತ ಸಮಸ್ಯೆಯಾಗಿದೆ. ಸೊಳ್ಳೆಗಳ ಕಾಟ ಸಹ ಬಹಳ ಇದೆ. ಇದರ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದರು.
ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿ ಬ್ಲಾಕ್ ಅಧ್ಯಕ್ಷ ವಿಷ್ಣುವರ್ಧನ್, ವಾರ್ಡ್ ಮಖಂಡರಾದ ಪ್ರಭಂಜನ ಕುಮಾರ, ಲೋಕೇಶ, ವಾರ್ಡಿನ ನಾಗರಿಕರು ಭಾಗವಹಿಸಿದ್ದರು.