ಬಳ್ಳಾರಿ: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಂದಾಲ್ ಉಕ್ಕು ಕಾರ್ಖಾನೆಯ ವಿರುದ್ಧವೂ ಸಾರ್ವಜನಿಕರು ಡಂಗೂರ ಸಾರಿಸಿದ್ದರು. ಈಗ ಅಧಿಕಾರಿ ವರ್ಗದ ಪರ್ವ ಶುರುವಾಗಿದೆ.
ಜಿಲ್ಲೆಯ ಕಂಪ್ಲಿ ತಾಲೂಕಿನ ನಾನಾ ಗ್ರಾಮಗಳಲ್ಲಿನ ಅಗಸೆ ಕಟ್ಟೆ ಅಥವಾ ದೇಗುಲಗಳ ಕಟ್ಟೆಯ ಮೇಲೆ ಕುಳಿತುಕೊಂಡು ಜಿಂದಾಲ್ ವಿರುದ್ಧ ಹಾಗೂ ನೌಕರರನ್ನ ಊರಿನೊಳಗೆ ಬಹಿಷ್ಕರಿಸಬೇಕೆಂದು ಕಂಪ್ಲಿ ತಹಶೀಲ್ದಾರ್ ರೇಣುಕಾ ಅವರು ಜಾಗೃತಿ ಮೂಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಜಿಂದಾಲ್ ಕಾರ್ಖಾನೆಗಳಿಗೆ ಹೋಗುವ ಗ್ರಾಮಗಳ ಜನರ ಮನೆಗೆ ಭೇಟಿ ನೀಡಿ ತಹಶೀಲ್ದಾರ್ ಕಾರ್ಖಾನೆಗೆ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ. ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರನ್ನ ಯಾವುದೇ ಕಾರಣಕ್ಕೂ ಊರೊಳಗೆ ಬಿಟ್ಟುಕೊಳ್ಳಬಾರದು. ಮಹಾಮಾರಿ ಕೊರೊನಾ ವೈರಸ್ ಒಬ್ಬರಿಗೆ ಹರಡಿದರೆ ಸಾಕು, ಇಡೀ ಕುಟುಂಬ ಹಾಗೂ ಗ್ರಾಮಸ್ಥರಿಗೆ ಆವರಿಸಲಿದೆ. ಹೀಗಾಗಿ, ಜಿಂದಾಲ್ ನೌಕರರನ್ನ ಊರಿಂದಲೆ ಬಹಿಷ್ಕರಸಿ ಎಂದರು.
ಗೊಂದಲ ಸೃಷ್ಟಿ:
ಜಿಲ್ಲಾಡಳಿತದ ಒಂದು ನಿರ್ಧಾರ, ತಾಲೂಕು ಆಡಳಿತದ ಇನ್ನೊಂದು ನಿರ್ಧಾರದಿಂದ ಜನರನ್ನು ಗೊಂದಲಕ್ಕೀಡು ಮಾಡಿದೆ. ಜಿಂದಾಲ್ ಗೆ ಕೇಂದ್ರ ಸರ್ಕಾರದ ವಿನಾಯಿತಿ ಇದೆ. ಉದ್ಯೋಗಿಗಳ ಕಡಿತ ಮಾಡಿ ಕಾರ್ಯ ನಿರ್ವಹಿಸಬಹುದು ಎಂದು ಜಿಲ್ಲಾಡಳಿತ ಅನುಮತಿ ನೀಡಿದೆ. ಇನ್ನೊಂದೆಡೆ ತಾಲೂಕು ಆಡಳಿತ ಜಿಂದಾಲ್ ವ್ಯಾಪ್ತಿಯ ಗ್ರಾಮ ಗಳಲ್ಲಿ ಫ್ಯಾಕ್ಟರಿಗೆ ಹೋಗಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡುತ್ತಿದೆ.
ಹಾಗೊಂದು ವೇಳೆ ಹೋದರೆ ಗ್ರಾಮಕ್ಕೆ ಮತ್ತೆ ಬರಬೇಡಿ ಅಲ್ಲೇ ಉಳಿದು ಬಿಡಿ ಎಂದು ತಹಶೀಲ್ದಾರ್ ಹೇಳುತ್ತಿದ್ದಾರೆ. ನಿಮ್ಮ ಒಬ್ಬರ ಜೀವದ ಪ್ರಶ್ನೆಯಲ್ಲ ಇದು ಒಂದೊಂದು ಕುಟುಂಬದ ಪ್ರಶ್ನೆ ಯೋಚಿಸಿ ನಿರ್ಧರಿಸಿ ಎಂದು ಎಚ್ಚರಿಸುತ್ತಿದ್ದಾರೆ. ಜಿಲ್ಲಾಡಳಿತದ ಒಂದು ನಿರ್ಧಾರ, ತಾಲೂಕು ಆಡಳಿತದ ಮತ್ತೊಂದು ನಿರ್ಧಾರ. ಯಾವುದನ್ನ ಕೇಳಬೇಕು ಎನ್ನುವ ಗೊಂದಲದಲ್ಲಿ ನೌಕರರು ಇದ್ದಾರೆ.