ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಶಾಸಕ ಎಲ್ಬಿಪಿ ಭೀಮಾನಾಯ್ಕ್ ಅವರು ಅಡವಿ ಆನಂದ ದೇವನಹಳ್ಳಿಯ ಹಾಲು ಉತ್ಪಾದಕರ ಸಂಘದಲ್ಲಿ ಸುಳ್ಳು ದಾಖಲಾತಿ ನೀಡಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅವರನ್ನು ಅನರ್ಹರು ಎಂದು ಸ್ಥಳಿಯ ಕೋರ್ಟ್ ತೀರ್ಪು ನೀಡಿದೆ ಎಂದು ಹಾಲು ಉತ್ಪಾದಕರ ಸಂಘದ ಸದಸ್ಯರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಸದಸ್ಯ ಕೆ. ಬಸವರಾಜ್, ಶಾಸಕ ಎಲ್.ಬಿ.ಪಿ ಭೀಮಾನಾಯ್ಕ್ ಹಾಲು ಉತ್ಪಾದಕರ ಸಂಘದ ಸದಸ್ಯ ಕೆ. ಮಂಜುನಾಥ ಅವರ ಹೆಸರು ತೆಗೆದುಹಾಕಿ, ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಸಂಬಂಧಿಸಿದಂತೆ ಸಂಘದ ಸದಸ್ಯರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಹೊಸಪೇಟೆ ವಿಭಾಗ ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ಶಾಸಕ ಭೀಮಾನಾಯ್ಕ್ ಸದಸ್ಯತ್ವವನ್ನು ಕೋರ್ಟ್ ರದ್ದುಮಾಡಿದೆ. ಶಾಸಕರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ಮಾಜಿ ಅಧ್ಯಕ್ಷ ಬಸವರಾಜ್, 2017-2018ನೇ ಸಾಲಿನ ಅಡವಿ ಆನಂದ ದೇವನಹಳ್ಳಿಯ ಹಾಲು ಉತ್ಪಾದಕರ ಸಂಘದಿಂದ 13 ಸದಸ್ಯರ ನಾಮ ನಿರ್ದೇಶನ ಮಾಡಲಾಗಿತ್ತು. ಅದರಲ್ಲಿ ಶಾಸಕ ಭೀಮಾನಾಯ್ಕ್ ಅವರು ಸದಸ್ಯರಾಗಿರಲಿಲ್ಲ. 2018ನೇ ಸಾಲಿನಲ್ಲಿ ಕೆ. ಮಂಜುನಾಥ ಅವರ ಸದಸ್ಯತ್ವ ರದ್ದು ಮಾಡಿ ಶಾಸಕ ಭೀಮಾನಾಯ್ಕ್ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ನಂತರ ಬಳ್ಳಾರಿ ಹಾಲು ಒಕ್ಕೂಟದ ಅಧ್ಯಕ್ಷರು ಸಹ ಆಗಿ ನೇಮಕವಾಗಿದ್ದಾರೆ ಎಂದಿದ್ದಾರೆ.